
Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ದ್ರೌಪತಮ್ಮ ಧರ್ಮರಾಯಸ್ವಾಮಿ ದೇವರ ಹೂವಿನ ಕರಗ ಮಹೋತ್ಸವವು ಶನಿವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.
ಕರಗದ ಪೂಜಾರಿ ಅಭಿಲಾಷ್ ಅವರು ಹೂವಿನ ಕರಗವನ್ನು ಹೊತ್ತು ಮೇಲೂರು ಗ್ರಾಮದ ಪ್ರಮುಖ ವೃತ್ತಗಳಲ್ಲಿ, ತಮಟೆ ವಾದಗಳು ಮಂಗಳವಾದ್ಯಗಳ ವಾದನಗಳಿಗೆ ತಕ್ಕಂತೆ ನರ್ತಿಸಿ, ಭಕ್ತರನ್ನು ರಂಜಿಸಿದರು. ಮೇಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ, ವಾದ್ಯಗೋಷ್ಠಿ ಏರ್ಪಡಿಸಲಾಗಿತ್ತು. ಕರಗ ಮಹೋತ್ಸವದ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಿಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.
ವಹ್ನಿಕುಲ ಕ್ಷತ್ರಿಯ ತಿಗಳ ಸಮುದಾಯದ ವೀರಕುಮಾರರು, ಗೋವಿಂದ ನಾಮಸ್ಮರಣೆಯೊಂದಿಗೆ ಕರಗವನ್ನು ಹಿಂಬಾಲಿಸಿ, ಡೀ ಡಿಕ್ ಎಂದು ಕತ್ತಿಗಳ ಮುಖಾಂತರ ಆಲಗು ಸೇವೆಯನ್ನು ಸಮರ್ಪಣೆ ಮಾಡಿದರು.
ಮೇಲೂರು ಸೇರಿದಂತೆ ಮಳ್ಳೂರು, ಮುತ್ತೂರು, ಗಂಗನಹಳ್ಳಿ ಅಪ್ಪೇಗೌಡನಹಳ್ಳಿ, ಕಂಬದಹಳ್ಳಿ, ಚೌಡಸಂದ್ರ, ಬೆಳ್ಳೂಟಿ, ಭಕ್ತರಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಮಂದಿ ಕರಗ ವೀಕ್ಷಣೆಗೆ ಬಂದಿದ್ದರು.
ಕರಗ ಮಹೋತ್ಸವದ ಅಂಗವಾಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಹೂವಿನ ಕರಗ ಸಂಚರಿಸುವ ಬೀದಿಗಳಿಗೆ ವಿದ್ಯುತ್ ದೀಪಗಳಿಂದ ಅಲಂಕರಿಸಿ, ಮನೆಗಳ ಮುಂದೆ ರಂಗೋಲಿ ಗಳನ್ನು ಬಿಡಿಸಿ, ಭಕ್ತಿ ಭಾವದಿಂದ ಮಲ್ಲಿಗೆ ಹೂಗಳನ್ನು ಎರಚಿ ಕರಗವನ್ನು ಪೂಜಿಸಿ, ಆಶೀರ್ವಾದ ಪಡೆದುಕೊಂಡರು.