Home News ರೈಲ್ವೆ ಕೆಳಸೇತುವೆ ಕಬ್ಬಿಣದ ಸರಳು ಸಮಸ್ಯೆಗೆ ಶಾಶ್ವತ ಪರಿಹಾರ

ರೈಲ್ವೆ ಕೆಳಸೇತುವೆ ಕಬ್ಬಿಣದ ಸರಳು ಸಮಸ್ಯೆಗೆ ಶಾಶ್ವತ ಪರಿಹಾರ

0
Sidlaghatta Railway Underpass Waterlogging Permanent Solution

Sidlaghatta : ಶಿಡ್ಲಘಟ್ಟ–ಚಿಂತಾಮಣಿ ಮಾರ್ಗದ ವೀರಾಪುರ ಸಮೀಪದ ರೈಲ್ವೆ ಕೆಳಸೇತುವೆಯಲ್ಲಿ ನೀರು ಹರಿದು ಹೋಗಲು ಅಳವಡಿಸಲಾಗಿದ್ದ ಮೋರಿಯ ಕಬ್ಬಿಣದ ಸರಳುಗಳ ವೆಲ್ಡಿಂಗ್ ಆಗಾಗ್ಗೆ ಕಿತ್ತುಬರುತ್ತಿದ್ದ ಸಮಸ್ಯೆಗೆ ಕೊನೆಗೂ ಶಾಶ್ವತ ಪರಿಹಾರ ಕಲ್ಪಿಸಲಾಗಿದೆ.

ಕಳೆದ ಐದಾರು ತಿಂಗಳುಗಳಲ್ಲಿ ಐದಾರು ಬಾರಿ ಕಬ್ಬಿಣದ ಸರಳುಗಳ ವೆಲ್ಡಿಂಗ್ ಕಿತ್ತು, ಕಬ್ಬಿಣದ ರಾಡುಗಳು ಮೇಲ್ಮುಖವಾಗಿ ಎದ್ದು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದವು. ಈ ಕಾರಣದಿಂದ ನಾಲ್ಕೈದು ಅಪಘಾತಗಳು ಸಂಭವಿಸಿದ್ದವು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಾತ್ಕಾಲಿಕ ದುರಸ್ತಿ ಕೈಗೊಂಡರೂ, ಕೆಲವೇ ದಿನಗಳಲ್ಲಿ ಮತ್ತೆ ಸಮಸ್ಯೆ ಮರುಕಳಿಸುತ್ತಿತ್ತು.

ಈ ಕುರಿತು ಕೆಳಸೇತುವೆ ಸಮೀಪದ ವೀರಾಪುರ ಹಾಗೂ ತಲದುಮ್ಮನಹಳ್ಳಿ ಗ್ರಾಮಸ್ಥರು ಹಲವು ಬಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರೈಲ್ವೆ ಇಲಾಖೆ ಮತ್ತು ಪೊಲೀಸರಿಗೆ ಮನವಿ ಸಲ್ಲಿಸಿದ್ದರು. ತಾತ್ಕಾಲಿಕ ದುರಸ್ತಿ ಬದಲು ಶಾಶ್ವತ ಕಾಮಗಾರಿ ಕೈಗೊಳ್ಳಬೇಕು ಎಂದು ಅಗತ್ಯವಿದ್ದರೆ ಒಂದೆರಡು ದಿನ ಸಂಚಾರಕ್ಕೆ ತೊಂದರೆಯಾದರೂ ಪರವಾಗಿಲ್ಲ, ಇಲ್ಲವಾದರೆ ರಸ್ತೆ ತಡೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

ಅಂತಿಮವಾಗಿ ಶಾಸಕ ಬಿ.ಎನ್. ರವಿಕುಮಾರ್ ಮಧ್ಯಪ್ರವೇಶಿಸಿ ರೈಲ್ವೆ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಪೊಲೀಸರು ಹಾಗೂ ಸ್ಥಳೀಯರೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಂಡರು. ಮರುಕಳಿಸದ ರೀತಿಯಲ್ಲಿ ಶಾಶ್ವತ ದುರಸ್ತಿ ಕೈಗೊಳ್ಳುವಂತೆ ಸೂಚಿಸಿದ ಹಿನ್ನೆಲೆಯಲ್ಲಿ, ಕಬ್ಬಿಣದ ಸರಳುಗಳನ್ನು ಸಂಪೂರ್ಣ ತೆರವುಗೊಳಿಸಿ ನೀರು ಸರಾಗವಾಗಿ ಹರಿದು ಹೋಗಲು ಪೈಪ್ ಅಳವಡಿಸಲಾಗಿದೆ. ಜೊತೆಗೆ ಸಿಮೆಂಟ್ ದಿಂಡು ನಿರ್ಮಿಸಲಾಗಿದ್ದು, ಅದರ ಕ್ಯೂರಿಂಗ್ ಕಾರ್ಯಕ್ಕೆ ವೀರಾಪುರ ಗ್ರಾಮಸ್ಥರು ಟ್ಯಾಂಕರ್ ಮೂಲಕ ನೀರು ಪೂರೈಸಿ ಸಹಕರಿಸುತ್ತಿದ್ದಾರೆ.

ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಕೆಳಸೇತುವೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಜಾರಿಯಲ್ಲಿದೆ. ಇನ್ನೆರಡು–ಮೂರು ದಿನಗಳಲ್ಲಿ ಕಾಮಗಾರಿ ಪೂರ್ಣಗೊಂಡು ವಾಹನ ಸಂಚಾರಕ್ಕೆ ಸಂಪೂರ್ಣ ಮುಕ್ತವಾಗುವ ನಿರೀಕ್ಷೆಯಿದೆ. ಕಬ್ಬಿಣದ ಸರಳುಗಳ ಸಮಸ್ಯೆ ನಿವಾರಣೆಯಾಗಿರುವುದರಿಂದ ಇನ್ನು ಮುಂದೆ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗಲಿದೆ ಎಂಬ ಆಶಾಭಾವನೆ ಸ್ಥಳೀಯರಲ್ಲಿ ವ್ಯಕ್ತವಾಗಿದೆ.

In English: The recurring iron-rod grille failure at the Veerapura railway underpass on the Sidlaghatta–Chintamani road — which had caused several accidents over the past five to six months — has finally been permanently fixed. Following repeated appeals from Veerapura and Taladummanahalli villagers, MLA B.N. Ravikumar intervened with railway, NHAI and police officials; the iron grille was fully removed and replaced with a pipe outlet plus a cured cement kerb. One-way traffic has been in place during the week-long repair, expected to fully reopen in two to three days.

ಸಂಬಂಧಿತ ಸುದ್ದಿ: ರೈಲ್ವೆ ಕೆಳಸೇತುವೆಯಲ್ಲಿ ಸಂಚಾರಕ್ಕೆ ಅಡಚಣೆ – ಅಧಿಕಾರಿಗಳ ಭೇಟಿ

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version