
Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ವಹ್ನಿಕುಲ ಕ್ಷತ್ರಿಯರ (ತಿಗಳರ) ಟ್ರಸ್ಟ್ ವತಿಯಿಂದ ದ್ರೌಪತಮ್ಮ ಧರ್ಮರಾಯಸ್ವಾಮಿಯ ಹಸಿಕರಗ ಮಹೋತ್ಸವ ಗುರುವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.
ಕರಗದ ಪೂಜಾರಿ ಅಭಿಲಾಷ್ ಅವರು ಹಸಿಕರಗವನ್ನು ಹೊತ್ತು ಗ್ರಾಮದ ಚಂಗಲರಾಯರೆಡ್ಡಿ ವೃತ್ತದಲ್ಲಿ, ತಮಟೆ ವಾದನಗಳು, ಮಂಗಳವಾದ್ಯಗಳ ವಾದನಕ್ಕೆ ತಕ್ಕಂತೆ ನೃತ್ಯ ಮಾಡುತ್ತಾ ರಂಜಿಸಿದರು. ನಂತರ ಗಂಗಾದೇವಿ ದೇವಾಲಯ, ಉಮಾಮಹೇಶ್ವರ ದೇವಾಲಯ ಸೇರಿದಂತೆ ದೇವಾಲಯಗಳಿಗೆ ತೆರಳಿ, ಪೂಜೆ ಸಲ್ಲಿಸಿದರು.
ವೀರಕುಮಾರರು ಕರಗವನ್ನು ಹಿಂಬಾಲಿಸಿ, ಅಲಗು ಸೇವೆ ಮಾಡಿದರು. ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಮಂದಿ ಬಂದು ಕರಗ ವೀಕ್ಷಣೆ ಮಾಡಿದರು. ವಹ್ನಿಕುಲ ಕ್ಷತ್ರಿಯರ ಟ್ರಸ್ಟ್ ನ ಹಿರಿಯರು, ಗ್ರಾಮದ ಮುಖಂಡರುಗಳು, ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.