
Sidlaghatta : ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದ ರೈತ ಜಗದೀಶ್ ಅವರ ಹಿಪ್ಪುನೇರಳೆ ತೋಟಕ್ಕೆ ಅಪರಿಚಿತರು ವಿಷಕಾರಿ ರಾಸಾಯನಿಕ ಸಿಂಪಡಿಸಿದ ಪರಿಣಾಮ ರೇಷ್ಮೆ ಕೃಷಿಗೆ ಹಾನಿಯಾಗಿರುವ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ. ಘಟನೆಯಿಂದ ಸುಮಾರು 20 ಮೂಟೆ ಹಿಪ್ಪುನೇರಳೆ ಸೊಪ್ಪು ಹಾನಿಗೊಳಗಾಗಿದೆ.
ಸುಮಾರು 25 ವರ್ಷಗಳಿಂದ ರೇಷ್ಮೆ ಹುಳು ಸಾಕಾಣಿಕೆ ನಡೆಸುತ್ತಿರುವ ಜಗದೀಶ್ ಅವರು ಪ್ರತಿ ತಿಂಗಳು ರೇಷ್ಮೆ ಗೂಡು ಉತ್ಪಾದಿಸಿ ಜೀವನ ಸಾಗಿಸುತ್ತಿದ್ದಾರೆ. ರೇಷ್ಮೆ ಹುಳುಗಳು ಗೂಡು ಕಟ್ಟುವ ಹಂತಕ್ಕೆ ತಲುಪಿದ್ದ ಸಂದರ್ಭದಲ್ಲಿ ಎಂದಿನಂತೆ ಹಿಪ್ಪುನೇರಳೆ ಸೊಪ್ಪು ಕಟಾವು ಮಾಡಲು ತೋಟಕ್ಕೆ ತೆರಳಿದ ವೇಳೆ ವಿಷಕಾರಿ ರಾಸಾಯನಿಕದ ವಾಸನೆ ಬಂದಿದ್ದು, ಸ್ಥಳ ಪರಿಶೀಲಿಸಿದಾಗ ರಾಸಾಯನಿಕದ ಬಾಟಲಿಯ ಮುಚ್ಚಳ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಅನುಮಾನಗೊಂಡ ಅವರು ಮುನ್ನೆಚ್ಚರಿಕೆ ಕ್ರಮವಾಗಿ ಕಟಾವು ಮಾಡಿದ ಸೊಪ್ಪಿನ ಸ್ವಲ್ಪ ಭಾಗವನ್ನು ಪ್ರತ್ಯೇಕವಾಗಿ ಕೆಲವು ರೇಷ್ಮೆ ಹುಳುಗಳಿಗೆ ನೀಡಿದಾಗ ಅವು ತಕ್ಷಣವೇ ಸಾವನ್ನಪ್ಪಿವೆ ಎಂದು ಜಗದೀಶ್ ತಿಳಿಸಿದ್ದಾರೆ. ಸಮಯಕ್ಕೆ ಮುನ್ನ ಎಚ್ಚರಿಕೆ ವಹಿಸದಿದ್ದರೆ ಸುಮಾರು 60 ಮೊಟ್ಟೆಗಳ ರೇಷ್ಮೆ ಬೆಳೆ ಸಂಪೂರ್ಣ ನಾಶವಾಗುವ ಸಾಧ್ಯತೆ ಇತ್ತು ಎಂದು ಅವರು ಹೇಳಿದ್ದಾರೆ.
ಅಧಿಕಾರಿಗಳ ಪ್ರತಿಕ್ರಿಯೆ ಏನು?
ಮಾಹಿತಿ ತಿಳಿದ ಕೂಡಲೇ ಶಿಡ್ಲಘಟ್ಟ ವಿಭಾಗದ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಅಕ್ಮಲ್ ಪಾಷಾ ಹಾಗೂ ರೇಷ್ಮೆ ವಿಸ್ತರಣಾಧಿಕಾರಿ ಜಗದೇವಪ್ಪ ಗುಗ್ಗರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಮಾತನಾಡಿದ ಅಕ್ಮಲ್ ಪಾಷಾ, “ನನ್ನ 16 ವರ್ಷಗಳ ಸೇವಾ ಅವಧಿಯಲ್ಲಿ ಇಂತಹ ಘಟನೆ ಮೂರನೇ ಬಾರಿ ಕಂಡುಬಂದಿದೆ. ರೈತರ ತೋಟಗಳಿಗೆ ವಿಷಕಾರಿ ರಾಸಾಯನಿಕ ಸಿಂಪಡಿಸುವುದು ಅತ್ಯಂತ ಖಂಡನೀಯ. ರೈತರು ಸೊಪ್ಪು ಕಟಾವು ಮಾಡುವ ಮುನ್ನ ತೋಟವನ್ನು ಪರಿಶೀಲಿಸಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು” ಎಂದು ಸಲಹೆ ನೀಡಿದರು.
ಇದೇ ರೀತಿಯ ಘಟನೆ ಆರು ತಿಂಗಳ ಹಿಂದೆಯೂ ನಡೆದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಗದೀಶ್ ಆಗ್ರಹಿಸಿದ್ದಾರೆ. ಹಂಡಿಗನಾಳ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಮುನಿರೆಡ್ಡಿ ಮಾತನಾಡಿ, ಕೃಷಿಯನ್ನೇ ಅವಲಂಬಿಸಿರುವ ರೈತರಿಗೆ ಉದ್ದೇಶಪೂರ್ವಕವಾಗಿ ಹಾನಿ ಮಾಡುವುದು ಗಂಭೀರ ಕೃತ್ಯವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಪ್ಪಿತಸ್ಥರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
In English: A mulberry garden belonging to farmer Jagadish at Varadanayakanahalli was sprayed with a toxic chemical by unidentified persons on Tuesday morning, damaging about 20 sacks of mulberry leaves and threatening his silkworm crop of 60 eggs. Sericulture department officials Akmal Pasha and Jagadevappa Guggari inspected the site; Pasha called it the third such incident in his 16-year service and urged farmers to inspect gardens before harvesting leaves. A similar incident occurred six months ago; the farmer and local leaders have urged authorities to identify and act against those responsible.