ಪೂರ್ಣ ಪುಟ · Open full page

ಮಕ್ಕಳ ಹಕ್ಕು, ಸುರಕ್ಷತೆ ಕುರಿತು ಕಾನೂನು ಅರಿವು: ವಿದ್ಯಾರ್ಥಿಗಳಿಗೆ ನ್ಯಾಯಾಧೀಶರ ಸಲಹೆ

Sidlaghatta judge addressing students at a legal awareness programme in a residential school

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿಯ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳು ಹಾಗೂ ಸುರಕ್ಷತೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. JMFC ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸುವ ಉದ್ದೇಶದಿಂದ ಜಾರಿಗೊಳಿಸಿರುವ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ (ಪೋಕ್ಸೊ) ಹಾಗೂ ಮಕ್ಕಳ ಹಕ್ಕುಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ ಅವರು, ಮಕ್ಕಳ ಸುರಕ್ಷತೆಯ ವಿಚಾರದಲ್ಲಿ ಪೋಷಕರು, ಶಿಕ್ಷಕರು ಮತ್ತು ಸಮಾಜದ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ತಿಳಿಸಿದರು.

ಅನುಚಿತ ವರ್ತನೆ ಎದುರಾದರೆ ಮೌನವಾಗಿರಬೇಡಿ

ಪರಿಚಿತರು ಅಥವಾ ಅಪರಿಚಿತರು ಯಾರೇ ಆಗಿರಲಿ, ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸಿದರೆ ಅದನ್ನು ಸಹಿಸಿಕೊಂಡು ಸುಮ್ಮನಿರಬಾರದು. ಅಂತಹ ಸಂದರ್ಭಗಳಲ್ಲಿ ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ತೆರಳಿ ಪೋಷಕರು, ಶಿಕ್ಷಕರು ಅಥವಾ ನಂಬಿಕಸ್ಥ ಹಿರಿಯರಿಗೆ ವಿಷಯ ತಿಳಿಸಬೇಕು. ಗುಡ್ ಟಚ್ ಮತ್ತು ಬ್ಯಾಡ್ ಟಚ್ ನಡುವಿನ ವ್ಯತ್ಯಾಸವನ್ನು ಮಕ್ಕಳು ಅರಿತುಕೊಳ್ಳಬೇಕು. ತಮ್ಮೊಂದಿಗೆ ನಡೆಯುವ ಅನುಚಿತ ವರ್ತನೆಯ ಬಗ್ಗೆ ಧೈರ್ಯವಾಗಿ ಹೇಳಿಕೊಳ್ಳುವುದರಿಂದ ದೌರ್ಜನ್ಯವನ್ನು ತಡೆಯಲು ಹಾಗೂ ಇತರ ಮಕ್ಕಳನ್ನು ಅಪಾಯದಿಂದ ರಕ್ಷಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಬಾಲ್ಯವಿವಾಹ ತಡೆಗೆ ಸಹಾಯವಾಣಿ ಬಳಸಿ

ನಿಗದಿತ ವಯಸ್ಸಿಗೆ ಮುನ್ನ ವಾಹನ ಚಾಲನೆ ಮಾಡುವುದು ಕಾನೂನುಬಾಹಿರವಾಗಿದೆ. ಬಾಲ್ಯವಿವಾಹವು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಬಾಲ್ಯವಿವಾಹ ನಡೆಯುತ್ತಿರುವುದು ಗಮನಕ್ಕೆ ಬಂದರೆ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಸಲಹೆ ನೀಡಿದರು.

ಡಿಜಿಟಲ್ ಜಗತ್ತಿನಲ್ಲೂ ಎಚ್ಚರಿಕೆ ಅಗತ್ಯ

ತಂತ್ರಜ್ಞಾನದ ದುರ್ಬಳಕೆಯಿಂದ ವೈಯಕ್ತಿಕ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಜವಾಬ್ದಾರಿಯುತವಾಗಿ ಮೊಬೈಲ್ ಬಳಸಬೇಕು. ಶಿಕ್ಷಣಕ್ಕೆ ಆದ್ಯತೆ ನೀಡಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.

ಮಕ್ಕಳ ಹಕ್ಕು, ಆರೈಕೆ ಮತ್ತು ರಕ್ಷಣೆಯ ಕುರಿತು ಅರಿವು

ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಮೀನಾ ಜೈನ್ ಅವರು ಗ್ರಾಮಾಂತರ ಟ್ರಸ್ಟ್‌ ನ ಮಾಸ್ಟರ್ ಟ್ರೈನರ್ ಆಗಿ ಪಾಲ್ಗೊಂಡು, ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ (ಪೋಕ್ಸೊ) ಹಾಗೂ ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ದೈನಂದಿನ ಜೀವನದ ಉದಾಹರಣೆಗಳನ್ನು ಬಳಸಿಕೊಂಡು ಕಾಯ್ದೆಗಳ ಉದ್ದೇಶ, ಮಕ್ಕಳ ಹಕ್ಕುಗಳು, ಸುರಕ್ಷತೆ ಮತ್ತು ರಕ್ಷಣೆಯ ಅಗತ್ಯವನ್ನು ವಿವರಿಸಿದರು. ಸಂಕಷ್ಟದಲ್ಲಿರುವ ಮಕ್ಕಳಿಗೆ ನೆರವು ನೀಡುವ ವ್ಯವಸ್ಥೆಗಳು, ಮಕ್ಕಳ ಮೇಲೆ ದೌರ್ಜನ್ಯ ನಡೆದಾಗ ಅನುಸರಿಸಬೇಕಾದ ಕ್ರಮಗಳು ಹಾಗೂ ಮಕ್ಕಳ ಆರೈಕೆ ಮತ್ತು ರಕ್ಷಣೆಯಲ್ಲಿ ಕುಟುಂಬ, ಶಾಲೆ ಮತ್ತು ಸಮಾಜದ ಪಾತ್ರದ ಕುರಿತು ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಭಾವನಾ, ಸಹಾಯಕ ಸರ್ಕಾರಿ ಅಭಿಯೋಜಕ ಮೊಹಮ್ಮದ್ ಖಾಜಾ, ವಕೀಲರ ಸಂಘದ ಅಧ್ಯಕ್ಷ ಎ. ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ. ಭಾಸ್ಕರ್, ವಕೀಲರಾದ ಚಂದ್ರಶೇಖರ್, ತಾಸೀನ್ ತಾಜ್ ಮತ್ತು ವೀಣಾ, ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಕೃಷ್ಣಮೂರ್ತಿ, ಗ್ರಾಮಾಂತರ ಟ್ರಸ್ಟ್‌ನ ಉಷಾಶೆಟ್ಟಿ, ಅನಂತಲಕ್ಷ್ಮಿ ಉಪಸ್ಥಿತರಿದ್ದರು.

ಕಾನೂನು ಅರಿವಿನ ಇನ್ನಷ್ಟು ವರದಿಗಳು: ಮಕ್ಕಳ ಬೆಳವಣಿಗೆಗೆ ಪೌಷ್ಟಿಕ ಆಹಾರ ಅತ್ಯಗತ್ಯ, ಹಿರಿಯ ನಾಗರಿಕರ ಹಕ್ಕುಗಳ ಬಗ್ಗೆ ಅರಿವು ಅಗತ್ಯ ಹಾಗೂ ಕಾನೂನು ಅರಿವು ಸುದ್ದಿಗಳು.

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

Nearby

ಇದನ್ನೂ ಓದಿ

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Exit mobile version