Home News ನಗರಸಭೆಗೆ ಸೇರಿದ ಅಂಗಡಿಗಳ ಮರುಹರಾಜು ಮುಂದೂಡಿಕೆ

ನಗರಸಭೆಗೆ ಸೇರಿದ ಅಂಗಡಿಗಳ ಮರುಹರಾಜು ಮುಂದೂಡಿಕೆ

0
Sidlaghatta Municipality Shop Auction Postpone

Sidlaghatta : ಶಿಡ್ಲಘಟ್ಟ ನಗರಸಭೆಗೆ ಸೇರಿದ ಸುಮಾರು 92 ಅಂಗಡಿಗಳ ಮರುಹರಾಜು ನಡೆಸಲು ಅಧಿಕಾರಿಗಳು ಸೋಮವಾರ ಸಿದ್ದತೆಗೊಳಿಸಿದ್ದರಾದರೂ ಅಂತಿಮ ಕ್ಷಣದ ರಾಜಕೀಯ ಒತ್ತಡಗಳಿಂದ ಮರುಹರಾಜು ಪ್ರಕ್ರಿಯೆಯನ್ನು ಮುಂದಿನ ಒಂದು ತಿಂಗಳ ಕಾಲ ಮುಂದೂಡಲಾಯಿತು.

ನಗರದ ದಿಬ್ಬೂರಹಳ್ಳಿ ರಸ್ತೆಯ IDSMT ಯೋಜನೆಯಡಿ ನಿರ್ಮಿಸಿರುವ 46 ಅಂಗಡಿ ಹಾಗೂ MF ಯೋಜನೆಯಡಿ ನಿರ್ಮಿಸಿರುವ 5 ಅಂಗಡಿಗಳ ಮರುಹರಾಜಿಗೆ ಡಿಸೆಂಬರ್ 26, ರ ಸೋಮವಾರ, ದರ್ಗಾಮೊಹಲ್ಲಾದ ಬಳಿ ನಿರ್ಮಿಸಿರುವ 20 ಅಂಗಡಿಗಳ ಮರುಹರಾಜು ಡಿಸೆಂಬರ್ 27 ರ ಮಂಗಳವಾರ ಹಾಗೂ ಅಶೋಕರಸ್ತೆಯ ದ್ವಿಮುಖ ಗಣಪತಿ ದೇವಾಲಯದ ಪಕ್ಕದಲ್ಲಿರುವ 4, ಹಳೆ ಅಂಚೆ ಕಚೇರಿಯ ಬಳಿಯ 1, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ 9, ಸಲ್ಲಾಪುರಮ್ಮ ದೇವಾಲಯದ ಮುಂಬಾಗದ 5 ಅಂಗಡಿಗಳ ಮರು ಹರಾಜಿಗೆ ಡಿಸೆಂಬರ್ 28 ರ ಬುಧವಾರ ದಿನಾಂಕ ನಿಗದಿಮಾಡಲಾಗಿತ್ತು.

ನಗರದ ದಿಬ್ಬೂರಹಳ್ಳಿ ರಸ್ತೆಯ ಐಡಿಎಸ್‌ಎಂಟಿ ಯೋಜನೆಯಡಿ ನಿರ್ಮಿಸಿರುವ 46 ಅಂಗಡಿ ಹಾಗೂ ಎಂ.ಎಫ್ ಯೋಜನೆಯಡಿ ನಿರ್ಮಿಸಿರುವ 5 ಅಂಗಡಿಗಳು ಸೇರಿದಂತೆ ಒಟ್ಟು 51 ಅಂಗಡಿಗಳ ಮರುಹರಾಜು ಶತಾಯ ಗತಾಯ ನಡೆಸಿಯೇ ತೀರುತ್ತೇವೆ ಎಂದು ಪಟ್ಟು ಹಿಡಿದ ನಿಂತಿದ್ದ ಆಡಳಿತ ಮಂಡಳಿಯ ಕೆಲ ಸದಸ್ಯರು ಸೇರಿದಂತೆ ಅಧಿಕಾರ ವರ್ಗ ಧಿಡೀರನೆ ಸೋಮವಾರ ಮರುಹರಾಜು ದಿನಾಂಕವನ್ನು ಮುಂದೂಡಿರುವುದು ನಾಗರಿಕರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕಳೆದ 20 ವರ್ಷಗಳ ಹಿಂದೆ ನಡೆದಿದ್ದ ಹರಾಜಿನಲ್ಲಿ ಅಂಗಡಿ ಪಡೆದ ಬಹುತೇಕರು ಉಪಬಾಡಿಗೆ ಆಧಾರದಲ್ಲಿ ಬೇರೆಯವರಿಗೆ ಅಂಗಡಿಗಳನ್ನು ಬಾಡಿಗೆಗೆ ನೀಡಿರುವುದು ಹಾಗೂ ಬಹುತೇಕ ಅಂಗಡಿಗಳವರು ನಗರಸಭೆಗೆ ಕಾಲ ಕಾಲಕ್ಕೆ ಬಾಡಿಗೆ ಪಾವತಿ ಮಾಡದೇ ಲಕ್ಷಾಂತರ ರೂ ಹಣ ಬಾಕಿ ಉಳಿಸಿಕೊಂಡಿದ್ದ ಹಿನ್ನಲೆಯಲ್ಲಿ ಈ ಬಾರಿ ಮರು ಹರಾಜು ನಡದೇ ನಡೆಯುತ್ತದೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಹಬ್ಬಿತ್ತಾದರೂ ಅಂತಿಮ ಕ್ಷಣದ ರಾಜಕೀಯ ಒತ್ತಡಗಳಿಂದ ಅಂಗಡಿಗಳ ಮರುಹರಾಜು ಪ್ರಕ್ರಿಯೆ ಮುಂದೂಡಲಾಗಿದೆ ಎನ್ನಲಾಗುತ್ತಿದೆ.

“ನಗರಸಭೆಗೆ ಸೇರಿದ ಸುಮಾರು 92 ಅಂಗಡಿಗಳ ಮರುಹರಾಜು ನಡೆಸಲು ಎಲ್ಲಾ ಸಿದ್ದತೆ ಮಾಡಲಾಗಿತ್ತು. ಆದರೆ ಮರು ಹರಾಜು ನಡೆಸದಂತೆ ಕೆಲ ಅಂಗಡಿ ಬಾಡಿಗೆದಾರರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ಹಿನ್ನಲೆಯಲ್ಲಿ ಗೌರವಾನ್ವಿತ ನ್ಯಾಯಾಲಯ ಆರು ವಾರಗಳ ಕಾಲ ಅಂಗಡಿ ಬಾಡಿಗೆದಾರರನ್ನು ಖುಲ್ಲಾ ಪಡಿಸದಂತೆ ಆದೇಶ ನೀಡಿರುವ ಹಿನ್ನಲೆಯಲ್ಲಿ, ಮರುಹರಾಜು ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಜೊತೆಗೆ ಬಾಕಿ ಇರುವ ಎಲ್ಲಾ ಅಂಗಡಿಗಳವರು ಬಾಡಿಗೆ ಹಣ ಪಾವತಿಸಲು ಸ್ವಯಂ ಪ್ರೇರಿತರಾಗಿ ಮುಂದೆ ಬಂದಿರುವ ಹಿನ್ನಲೆಯಲ್ಲಿ ಒಂದು ತಿಂಗಳ ಕಾಲಾವಕಾಶ ನೀಡಿದ್ದು, ಮುಂದಿನ ದಿನಗಳಲ್ಲಿ ಅಂಗಡಿಗಳ ಮರುಹರಾಜು ನಡೆಸಲು ಕಾನೂನು ತಜ್ಞರಿಂದ ಸಲಹೆ ಪಡೆದು ದಿನಾಂಕ ನಿಗದಿಪಡಿಸಲಾಗುವುದು” ಎಂದು ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್ ತಿಳಿಸಿದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version