Home News ಗೋಡಂಬಿ ಬೆಳೆ ಕುರಿತಂತೆ ಅಧ್ಯಯನ ಪ್ರವಾಸ ಕೈಗೊಂಡ ರೈತರು

ಗೋಡಂಬಿ ಬೆಳೆ ಕುರಿತಂತೆ ಅಧ್ಯಯನ ಪ್ರವಾಸ ಕೈಗೊಂಡ ರೈತರು

0
Sidlaghatta Farmers Cashew crop Study Tour

Sidlaghatta : ಜಿಲ್ಲೆಯ 25 ರೈತರು ಮತ್ತು 25 ರೈತ ಮಹಿಳೆಯರು ಐದು ದಿನಗಳ ಕಾಲ ಗೋಡಂಬಿ ಬೆಳೆ ಕುರಿತಂತೆ ಅಧ್ಯಯನ ಪ್ರವಾಸ ಮಾಡಿ ತರಬೇತಿ ಪಡೆದಿದ್ದಾರೆ.

ಕೃಷಿ ವಿಶ್ವವಿದ್ಯಾಲಯ ಪುತ್ತೂರಿನಲ್ಲಿ “ಗೋಡಂಬಿ ಬೆಳೆಯ ಸುಧಾರಿತ ತಾಂತ್ರಿಕತೆಗಳು ಹಾಗೂ ಗೋಡಂಬಿ ಭವಿಷ್ಯವುಳ್ಳ ತೋಟಗಾರಿಕೆ ಬೆಳೆ” ಎಂಬ ಶೀರ್ಷಿಕೆಯ ಕಾರ್ಯಾಗಾರವನ್ನು ಆಯೋಜಿಸಿತ್ತು.

ತರಬೇತಿಯಲ್ಲಿ ಹಣ್ಣಿನ ಜ್ಯೂಸ್, ಪಲ್ಪ್, ಲಾಲಿಪಪ್, ಪೇಡಾ, ಉಪ್ಪಿನಕಾಯಿ, ಮಾಲ್ಟ್ ಹಾಗೂ ಬೀಜದಿಂದ ಯಾವ ರೀತಿ ಗೋಡಂಬಿ ಪಲ್ಪ್ ತಯಾರಿಸಬಹುದು ಎಂಬುದಾಗಿ ವಿಜ್ಞಾನಿಗಳು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು.

ತಳಿಗಳ ಅಭಿವೃದ್ಧಿ ಕ್ಷೇತ್ರವಾದ ಉಳ್ಳಾಲ, ಮೂಡಿಗೆರೆಯಲ್ಲಿರುವ ನರ್ಸರಿ, ಶಿವಮೊಗ್ಗದ ತಾಂತ್ರಿಕ ಕೇಂದ್ರ ಮತ್ತು ನರ್ಸರಿ ಹಾಗೂ ಪ್ರಗತಿಪರ ರೈತರ ಮಿಶ್ರ ಬೆಳೆಯ ತೋಟಗಳನ್ನು ವೀಕ್ಷಿಸಿ ರೈತರು ಅನುಭವಗಳನ್ನು ಹಂಚಿಕೊಂಡರು.

“ಗೋಡಂಬಿಯನ್ನು ಬಡ ರೈತರು ಬೆಳೆದರೆ ಶ್ರೀಮಂತರು ತಿನ್ನುವಂತಾಗಿದೆ. ಆದ್ದರಿಂದ ಪ್ರತಿಯೊಬ್ಬ ರೈತರು ತಮ್ಮ ತೋಟ ಮತ್ತು ಮನೆ ಅಂಗಳದಲ್ಲಿ ಸಸಿ ನೆಟ್ಟರೆ ವರ್ಷಕ್ಕೆ ಆಗುವಷ್ಟು ಗೋಡಂಬಿ ದೊರೆಯುತ್ತದೆ. ಇಳಿಜಾರು ಹಾಗೂ ಗುಡ್ಡಗಳಂತಹ ಜಮೀನು ಇದಕ್ಕೆ ಸೂಕ್ತ. ನೀರಿಲ್ಲದ ಚಿಕ್ಕಬಳ್ಳಾಪುರ, ಕೋಲಾರ , ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ರೈತರು ಗೋಡಂಬಿ ಬೆಳೆಯಬಹುದು. ಗೋಡಂಬಿ ತಳಿಗಳಾದ ಉಳ್ಳಾಲ 1, 2, 4 , ವೆಂಗುರ್ಲ 1, 3, 4, ಚಿಂತಾಮಣಿ 1, 2 ಮುಂತಾದ ತಳಿಗಳ ಬಗ್ಗೆ ಮಾಹಿತಿ ಪಡೆದೆವು. ಧರ್ಮಸ್ಥಳ ಹಾಗೂ ಕೊರಗಜ್ಜ ದೈವ ಸನ್ನಿಧಿಯ ದರ್ಶನ ಪಡೆದೆವು” ಎಂದು ರೈತ ಅಧ್ಯಯನ ಪ್ರವಾಸದ ಸಂಯೋಜಕ ಹಿತ್ತಲಹಳ್ಳಿಯ ಕೃಷಿ ಪಂಡಿತ ಪುರಸ್ಕೃತ, ರೈತ ಕೂಟಗಳ ಒಕ್ಕೂಟದ ಅಧ್ಯಕ್ಷ ಎಚ್.ಜಿ.ಗೋಪಾಲಗೌಡ ತಿಳಿಸಿದರು.

ಜಿ.ಕೆ.ವಿಕೆ ಪ್ರೊಫೆಸರ್ ಗಳಾದ ಡಾ.ಪ್ರಮೀಳ , ಡಾ.ಮಧುಶ್ರೀ, ರೈತರಾದ ಬೋದಗೂರು ವೆಂಕಟಸ್ವಾಮಿರೆಡ್ಡಿ, ಶಿವಾನಂದ, ಗೋಪಾಲಕೃಷ್ಣ, ಕುಮಾರ, ಮಳ್ಳೂರು ವನಿತಾ, ಕಾಚಹಳ್ಳಿ ಶೈಲಜ, ಪ್ರಭ ರಾಜಣ್ಣ, ಕೇಶವರೆಡ್ಡಿ, ದೊಡ್ಡಪಾಪಣ್ಣ, ಜಯರಾಮ್, ನಾರಾಯಣಸ್ವಾಮಿ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

Exit mobile version