
Sidlaghatta : ಗ್ರಾಮೀಣ ಭಾಗದ ಜನರಿಗೂ ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳು ಸುಲಭವಾಗಿ ದೊರೆಯುವಂತೆ ತಾಲ್ಲೂಕಿನಾದ್ಯಂತ ನಂದಿನಿ ಬೂತ್ ಗಳನ್ನು ಸ್ಥಾಪಿಸಲು ಆದ್ಯತೆ ನೀಡಲಾಗುತ್ತಿದೆ ಎಂದು CHIMUL ನಿರ್ದೇಶಕ ಬಂಕ್ ಮುನಿಯಪ್ಪ ಹೇಳಿದರು.
ತಾಲ್ಲೂಕಿನ ಬಶೆಟ್ಟಹಳ್ಳಿ ಗ್ರಾಮದಲ್ಲಿ ಶುಕ್ರವಾರ ನೂತನವಾಗಿ ನಿರ್ಮಿಸಿರುವ ನಂದಿನಿ ಬೂತ್ ಉದ್ಘಾಟಿಸಿ ಅವರು ಮಾತನಾಡಿದರು.
“ನಂದಿನಿ ಹಾಲಿನ ಉತ್ಪನ್ನಗಳು ನಗರ ಪ್ರದೇಶಗಳಿಗೆ ಮಾತ್ರ ಸೀಮಿತ ಎಂಬ ಅಭಿಪ್ರಾಯವಿತ್ತು. ಇದನ್ನು ಬದಲಿಸುವ ಉದ್ದೇಶದಿಂದ ತಾಲ್ಲೂಕಿನ ಪ್ರತಿ ಹೋಬಳಿ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಂದಿನಿ ಬೂತ್ ಗಳನ್ನು ತೆರೆಯಲು ಯೋಜಿಸಲಾಗಿದೆ. ಗ್ರಾಮೀಣ ಜನರಿಗೂ ಗುಣಮಟ್ಟದ ಹಾಲು ಮತ್ತು ತುಪ್ಪದಿಂದ ತಯಾರಿಸಿದ ಉತ್ಪನ್ನಗಳು ಪ್ರತಿನಿತ್ಯ ಲಭ್ಯವಾಗಬೇಕು ಎಂಬುದು ನಮ್ಮ ಉದ್ದೇಶ. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ 14 ನಂದಿನಿ ಬೂತ್ ಗಳನ್ನು ತೆರೆಯಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಿಲ್ಕ್ ಪಾರ್ಲರ್ಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ” ಎಂದರು.
ಗ್ರಾಮೀಣ ರೈತರ ಕೊಡುಗೆ ಮಹತ್ವದ್ದು
CHIMUL ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕ ಎನ್. ನಾಗೇಶ್ ಮಾತನಾಡಿ, ನಂದಿನಿ ಉತ್ಪನ್ನಗಳು ದೇಶ-ವಿದೇಶಗಳಲ್ಲಿ ಖ್ಯಾತಿ ಗಳಿಸಲು ಗ್ರಾಮೀಣ ಭಾಗದ ಹೈನುಗಾರಿಕೆ ರೈತರ ಕೊಡುಗೆ ಮಹತ್ವದ್ದಾಗಿದೆ. ರೈತರು ಉತ್ಪಾದಿಸುವ ಹಾಲನ್ನು ಡೇರಿಗಳಿಗೆ ಪೂರೈಸುವುದರಿಂದ ವಿವಿಧ ಹಾಲಿನ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಒದಗಿಸಲು ಸಾಧ್ಯವಾಗಿದೆ. ತಿರುಪತಿಯಲ್ಲಿಯೂ ನಂದಿನಿ ತುಪ್ಪವನ್ನು ಬಳಸಿ ಲಡ್ಡು ತಯಾರಿಸಲಾಗುತ್ತಿದ್ದು, ಪ್ರತಿದಿನ ನಾಲ್ಕರಿಂದ ಐದು ಟನ್ ತುಪ್ಪ ಪೂರೈಕೆಯಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದ ಗ್ರಾಮೀಣ ಭಾಗದ ರೈತರು, ಮಹಿಳೆಯರು ಹಾಗೂ ಮಕ್ಕಳಿಗೂ ನಂದಿನಿ ಉತ್ಪನ್ನಗಳು ಸುಲಭವಾಗಿ ದೊರೆಯಬೇಕು ಎಂಬ ಉದ್ದೇಶದಿಂದ ಹೋಬಳಿ ಕೇಂದ್ರಗಳು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬೂತ್ಗಳನ್ನು ತೆರೆಯಲಾಗುತ್ತಿದೆ. ಗ್ರಾಮೀಣ ಜನರು ಈ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕ್ಯಾಟಲ್ ಫೀಡ್ ಘಟಕದ ವಿಚಾರವಾಗಿ ಪ್ರತಿಭಟನೆ
ದಿಬ್ಬೂರಹಳ್ಳಿ ಹಾಗೂ ಸಾದಲಿ ಭಾಗದ ರೈತರಿಗೆ ಅನುಕೂಲವಾಗುವಂತೆ ಕ್ಯಾಟಲ್ ಫೀಡ್ ಘಟಕ ಸ್ಥಾಪಿಸಲು ಶಾಸಕ ಬಿ.ಎನ್. ರವಿಕುಮಾರ್ ಅವರು ಶ್ರಮಿಸಿದ್ದರು. ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶವೂ ಘಟಕ ಸ್ಥಾಪನೆಯ ಹಿಂದಿತ್ತು. ಆದರೆ, ಇದಕ್ಕೆ ಸ್ಪಂದಿಸದ KMF ಅಧಿಕಾರಿಗಳ ಕಾರ್ಯವೈಖರಿ ಹಾಗೂ ದುರಾಡಳಿತದ ವಿರುದ್ಧ ಶನಿವಾರ ಬೆಳಿಗ್ಗೆ 11 ಗಂಟೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಎಂದು ಬಂಕ್ ಮುನಿಯಪ್ಪ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ CHIMUL ನಿರ್ದೇಶಕ ಹುಜಗೂರು ರಾಮಯ್ಯ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ವಿ. ನಾರಾಯಣಸ್ವಾಮಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ಗಂಗಮ್ಮ ದೇವಾಲಯ ಸಮಿತಿ ಅಧ್ಯಕ್ಷ ಬಿ.ವಿ. ತಿಮ್ಮಯ್ಯ, ಬಿ.ಕೆ. ದ್ಯಾವಪ್ಪ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಶಿವರಾಮರೆಡ್ಡಿ, ಮಂಜುನಾಥ್, ಜಯರಾಮರೆಡ್ಡಿ, ಮುಖಂಡರಾದ ಬಿ.ಎನ್. ಮಂಜುನಾಥ್, ಬಿ.ಎಸ್. ಉದಯ್ ಚಂದ್ರ ಉಪಸ್ಥಿತರಿದ್ದರು.
In English: CHIMUL (Kolar–Chikkaballapura Milk Union) director Bunk Muniyappa said priority is being given to opening Nandini booths across the taluk so that Nandini milk and milk products reach rural people, speaking after inaugurating a newly built Nandini booth at Bashettahalli on Friday. He said 14 Nandini booths are already open in the Sidlaghatta constituency and more milk parlours are planned, with booths proposed at every hobli centre and gram panchayat. CHIMUL district managing director N. Nagesh said about four to five tonnes of Nandini ghee are supplied daily to Tirupati for laddu making. Muniyappa also announced a large protest at 11 am on Saturday against KMF officials over a cattle feed unit that MLA B.N. Ravikumar had worked to set up for farmers of the Dibburahalli and Sadali areas; the allegation of mismanagement is the organisers’ own.