
Sidlaghatta : ಓಮಿನಿ ಕಾರು ಹಾಗೂ ಈಚರ್ ಗೂಡ್ಸ್ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 234ರ ಹೊಸಹಳ್ಳಿ ಗೇಟ್ ಸಮೀಪ ಭಾನುವಾರ ತಡರಾತ್ರಿ ನಡೆದಿದೆ.
In English: Three women died on the spot when their Omni car collided with a goods vehicle on NH-234 near Hosahalli Gate late Sunday night, while they were travelling from Chintamani taluk to Sidlaghatta’s Hujuguru village for flower-harvesting work.
ಮೃತರನ್ನು ಚಿಂತಾಮಣಿ ತಾಲ್ಲೂಕಿನ ಮಲ್ಲಿಕಾರ್ಜುನಪುರ ಗ್ರಾಮದ ರೂಪಾ (30), ರತ್ನಮ್ಮ (45) ಹಾಗೂ ಮುನಿಚೆನ್ನಮ್ಮ (40) ಎಂದು ಗುರುತಿಸಲಾಗಿದೆ.
ಮೃತರು ಹೂ ಕಟಾವು ಕೆಲಸಕ್ಕಾಗಿ ಮಲ್ಲಿಕಾರ್ಜುನಪುರದಿಂದ ಶಿಡ್ಲಘಟ್ಟ ತಾಲ್ಲೂಕಿನ ಹುಜುಗೂರು ಗ್ರಾಮಕ್ಕೆ ಓಮಿನಿ ಕಾರಿನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ರಾತ್ರಿ ಸುಮಾರು 2.30ರ ವೇಳೆಗೆ ಹೊಸಹಳ್ಳಿ ಗೇಟ್ ಸಮೀಪ ಓಮಿನಿ ಕಾರು ಹಾಗೂ ಈಚರ್ ಗೂಡ್ಸ್ ವಾಹನದ ನಡುವೆ ಡಿಕ್ಕಿ ಸಂಭವಿಸಿದೆ.
ಅಪಘಾತದ ರಭಸಕ್ಕೆ ಓಮಿನಿ ಕಾರು ಸಂಪೂರ್ಣ ಜಖಂಗೊಂಡಿದ್ದು, ಅದರಲ್ಲಿದ್ದ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ತಿಳಿದು ಶಿಡ್ಲಘಟ್ಟ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ.
ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಶಿಡ್ಲಘಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.