Home News ಎಕರೆಗೆ ₹50 ಸಾವಿರ ಬರ ಪರಿಹಾರಕ್ಕೆ ಆಗ್ರಹ: ಹೆದ್ದಾರಿಯಲ್ಲಿ ರೈತ ಸಂಘ, ಹಸಿರು ಸೇನೆ ಪ್ರತಿಭಟನೆ

ಎಕರೆಗೆ ₹50 ಸಾವಿರ ಬರ ಪರಿಹಾರಕ್ಕೆ ಆಗ್ರಹ: ಹೆದ್ದಾರಿಯಲ್ಲಿ ರೈತ ಸಂಘ, ಹಸಿರು ಸೇನೆ ಪ್ರತಿಭಟನೆ

0
Sidlaghatta Raitha Sangha Hasiru Sene farmers protest drought compensation memorandum

Sidlaghatta : ಬರಗಾಲ ಮತ್ತು ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು ಹಾಗೂ ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಿ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ರೈತರು ನಗರದ ಮಯೂರ ವೃತ್ತದ ಬಳಿ ಮಂಗಳವಾರ ರಾಷ್ಟ್ರೀಯ ಹೆದ್ದಾರಿ 234ರಲ್ಲಿ ಪ್ರತಿಭಟನೆ ನಡೆಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಸ್ಥಳಕ್ಕೆ ಆಗಮಿಸಿದ ಗ್ರೇಡ್‌-2 ತಹಶೀಲ್ದಾರ್ ಮಂಜುನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಮಾತನಾಡಿ, ರೈತರ ಹಿತ ಕಾಯುವುದಾಗಿ ಭರವಸೆ ನೀಡುವ ಸರ್ಕಾರಗಳು, ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿದರು.

“ರೈತರು ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಹಾಗೂ ಕಾರ್ಮಿಕರ ವೆಚ್ಚ ಭರಿಸಿ ವರ್ಷವಿಡೀ ಶ್ರಮಪಟ್ಟು ಬೆಳೆ ಬೆಳೆಯುತ್ತಾರೆ. ಆದರೆ, ಮಾರುಕಟ್ಟೆಯಲ್ಲಿ ನಿರೀಕ್ಷಿತ ಬೆಲೆ ಸಿಗದ ಕಾರಣ ನಷ್ಟ ಅನುಭವಿಸುತ್ತಿದ್ದಾರೆ. ಮಳೆಯ ಅಭಾವ, ಇಳುವರಿ ಕುಸಿತ ಮತ್ತು ಕೃಷಿ ವೆಚ್ಚದ ಹೆಚ್ಚಳದಿಂದ ಸಾಲದ ಹೊರೆ ಹೆಚ್ಚಾಗಿದೆ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು” ಎಂದು ಒತ್ತಾಯಿಸಿದರು.

ದೆಹಲಿಯಲ್ಲಿ ರೈತರ ಸಮಸ್ಯೆಗಳ ಕುರಿತು ನಡೆದ ಸಭೆಯಲ್ಲಿ ನಿರೀಕ್ಷಿತ ಭರವಸೆ ದೊರೆಯದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಹೆದ್ದಾರಿಗಳಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲು ಸಂಘಟನೆಯ ನಾಯಕತ್ವ ನಿರ್ಧರಿಸಿದೆ ಎಂದು ತಿಳಿಸಿದರು.

ಅಲ್ಪ ಮೊತ್ತದ ನೆರವು ಸಾಕಾಗದು

ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಬೆಳ್ಳೂಟಿ ಮುನಿಕೆಂಪಣ್ಣ ಮಾತನಾಡಿ, ಬರಗಾಲ ಮತ್ತು ಬೆಳೆ ನಷ್ಟದಿಂದ ತೊಂದರೆಗೀಡಾದ ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರವನ್ನು ತಕ್ಷಣ ಘೋಷಿಸಿ ವಿತರಿಸಬೇಕು ಎಂದು ಆಗ್ರಹಿಸಿದರು.

“ರೈತರು ಭಿಕ್ಷುಕರಲ್ಲ; ಇಡೀ ವಿಶ್ವಕ್ಕೆ ಅನ್ನ ನೀಡುವ ಅನ್ನದಾತರು. ರೈತರಿಗೆ ₹2,500 ನೆರವು ನೀಡುವ ಬದಲು, ಸರ್ಕಾರ ಇನ್ನೂ ₹500 ಸೇರಿಸಿ ₹3,000 ನೀಡಲಿ” ಎಂದು ನುಡಿದರು.

ಕೃಷಿ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಬೆಲೆ ನಿಗದಿಪಡಿಸುವುದು, ಬೆಳೆ ನಷ್ಟಕ್ಕೆ ಸಮರ್ಪಕ ಪರಿಹಾರ ನೀಡುವುದು ಮತ್ತು ಸಾಲದ ಹೊರೆಯನ್ನು ತಗ್ಗಿಸಲು ಕ್ರಮ ಕೈಗೊಳ್ಳುವುದು ಸರ್ಕಾರಗಳ ಜವಾಬ್ದಾರಿ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಬಾಲಮುರಳಿಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ಎಚ್.ಎನ್. ಕದಿರೇಗೌಡ, ತಾಲ್ಲೂಕು ಅಧ್ಯಕ್ಷ ಎನ್. ಮುನೇಗೌಡ, ಕಾರ್ಯದರ್ಶಿ ನವೀನ್ ಕುಮಾರ್, ಭೀಮಣ್ಣ, ಬಸವಪಟ್ಟಣ ಆಂಜಿನಪ್ಪ, ಪ್ರಭುದೇವ್, ಯಣ್ಣಂಗೂರು ನರಸಿಂಹಮೂರ್ತಿ, ನಾರಾಯಣಸ್ವಾಮಿ, ನಿರಂಜನ್ ಕುಮಾರ್ ಸೇರಿದಂತೆ ರೈತ ಸಂಘದ ಮುಖಂಡರು ಹಾಗೂ ರೈತರು ಭಾಗವಹಿಸಿದ್ದರು.

In English: Farmers led by the Karnataka Rajya Raitha Sangha and Hasiru Sene staged a protest on National Highway 234 near Mayura Circle in Sidlaghatta on Tuesday, demanding ₹50,000 per acre compensation for drought and crop loss and a scientific price for farm produce by implementing the Swaminathan report. They submitted a memorandum to Grade-2 Tahsildar Manjunath. The leaders said the protests on highways across the state were decided after a meeting in Delhi gave no expected assurance; these are the protesters’ demands and allegations.

For Daily Updates WhatsApp ‘HI’ to 7406303366

error: Content is protected !!
Exit mobile version