
Sidlaghatta : “ವ್ಯಕ್ತಿಯ ಹಿನ್ನೆಲೆ ಅಥವಾ ಬಡತನ ಆತನ ಪ್ರಗತಿಗೆ ಎಂದಿಗೂ ಅಡ್ಡಿಯಾಗುವುದಿಲ್ಲ. ಸಂವಿಧಾನ ನೀಡಿರುವ ಶಿಕ್ಷಣದ ಹಕ್ಕು ಒಬ್ಬ ಸಾಮಾನ್ಯ ವ್ಯಕ್ತಿಯನ್ನೂ ಅತ್ಯುನ್ನತ ಸ್ಥಾನದಲ್ಲಿ ಕೂರಿಸುವ ಶಕ್ತಿ ಹೊಂದಿದೆ,” ಎಂದು ಪ್ರಖ್ಯಾತ ಲೇಖಕಿ ಹಾಗೂ ಪ್ರಗತಿಪರ ಚಿಂತಕಿ ಡಾ. ಬಿ.ಟಿ. ಲಲಿತಾ ನಾಯಕ್ ತಿಳಿಸಿದರು.
ನಗರದ ಡಾಲ್ಫಿನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ “ಸವಿ ಸ್ಫೂರ್ತಿ 2026” – ಯುವ ಮನಸ್ಸುಗಳಿಗೊಂದು ಪ್ರೇರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಕಗಳಿಗಿಂತ ಮೌಲ್ಯ ದೊಡ್ಡದು: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆದಿಶೇಷರಾವ್ ಮಾತನಾಡಿ, “ವಿದ್ಯಾರ್ಥಿಗಳಿಗೆ ಕೇವಲ ಪುಸ್ತಕದ ಜ್ಞಾನವಿದ್ದರೆ ಸಾಲದು, ನೈತಿಕ ಶಿಕ್ಷಣವೂ ಅಷ್ಟೇ ಮುಖ್ಯ. ಅಂಕಗಳಿಗಿಂತ ಮಾನವೀಯ ಮೌಲ್ಯಗಳು ಹೆಚ್ಚಿನ ತೂಕ ಹೊಂದಿರುತ್ತವೆ. ಗುರು-ಹಿರಿಯರನ್ನು ಗೌರವಿಸದವನು ಬದುಕಿನಲ್ಲಿ ಯಶಸ್ಸು ಕಂಡ ಉದಾಹರಣೆಯೇ ಇಲ್ಲ,” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮೊಬೈಲ್ ಬಿಟ್ಟು ಕನಸಿನ ಹಿಂದೆ ಹೋಗಿ: ಡಾಲ್ಫಿನ್ಸ್ ಸಂಸ್ಥೆಯ ಅಧ್ಯಕ್ಷ ಎ. ನಾಗರಾಜ್ ಮಾತನಾಡಿ, “ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಾಣಬೇಕು. ಮೊಬೈಲ್ ಪ್ರಪಂಚದಲ್ಲಿ ಕಳೆದು ಹೋಗದೆ, ಸದಾ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಇಂದಿನ ವಿದ್ಯಾರ್ಥಿಗಳು ಸಮಾಜವನ್ನು ಸರಿ ದಾರಿಗೆ ಕೊಂಡೊಯ್ಯುವ ನಾಳಿನ ಬುದ್ಧಿಜೀವಿಗಳು,” ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಸಾಧಕ ವಿದ್ಯಾರ್ಥಿಗಳಿಗೆ ಮೆಡಲ್ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಿ ಗೌರವಿಸಲಾಯಿತು. ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕ ಅಶೋಕ್, ಪ್ರಾಂಶುಪಾಲ ಪ್ರೊ. ಎನ್. ಶ್ರೀನಿವಾಸ ಮೂರ್ತಿ ಸೇರಿದಂತೆ ಹಲವು ಶಿಕ್ಷಣ ತಜ್ಞರು ಉಪಸ್ಥಿತರಿದ್ದರು.