
Sidlaghatta, Chikkaballapur : “ನಮ್ಮ ಸಂವಿಧಾನವು ಕೇವಲ ಒಂದು ಪುಸ್ತಕವಲ್ಲ, ಅದು ದೇಶದ ಆತ್ಮ,” ಎಂದು ಶಾಸಕ ಬಿ.ಎನ್. ರವಿಕುಮಾರ್ ಹೇಳಿದರು. ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂವಿಧಾನವು ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಭ್ರಾತೃತ್ವದ ಮೌಲ್ಯಗಳ ಮೇಲೆ ನಿರ್ಮಿತವಾಗಿದ್ದು, ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಮೂಲಭೂತ ಸವಲತ್ತುಗಳನ್ನು ಒದಗಿಸುವ ಉದ್ದೇಶ ಹೊಂದಿದೆ. ಸಂವಿಧಾನದ ರಚನೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿಶ್ರಮ ಮತ್ತು ದೂರದೃಷ್ಟಿಯನ್ನು ಸ್ಮರಿಸುತ್ತಾ, “ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು” ಎಂಬ ತತ್ವವನ್ನು ಸಂವಿಧಾನ ಸಾರುತ್ತದೆ ಎಂದು ಶಾಸಕರು ಹೇಳಿದರು.
ತಹಶೀಲ್ದಾರ್ ಗಗನಸಿಂಧು ಮಾತನಾಡಿ, ಸಂವಿಧಾನವು ಜಾತಿ, ಧರ್ಮ, ಲಿಂಗ, ಸ್ಥಾನದ ಆಧಾರದ ಮೇಲೆ ಯಾವುದೇ ತಾರತಮ್ಯ ಇಲ್ಲದೆ ಎಲ್ಲ ನಾಗರಿಕರೂ ಸಮಾನರಾಗಿದ್ದಾರೆ ಎಂಬ ಸಂದೇಶ ನೀಡುತ್ತದೆ ಎಂದು ವಿವರಿಸಿದರು. ಪ್ರತಿಯೊಬ್ಬ ನಾಗರಿಕನಿಗೂ ತನ್ನ ಅಭಿಪ್ರಾಯ ಮತ್ತು ನಂಬಿಕೆಯನ್ನು ಸ್ವತಂತ್ರವಾಗಿ ವ್ಯಕ್ತಪಡಿಸುವ ಹಕ್ಕು ಇದೆ. ದೇಶದ ಸೌಹಾರ್ದತೆಯನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ ಎಂದರು.
ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ ಮಾತನಾಡಿ, ಸಂವಿಧಾನವು ಕೇವಲ ಹಕ್ಕುಗಳನ್ನೇ ಅಲ್ಲ, ನಾಗರಿಕರ ಕರ್ತವ್ಯಗಳನ್ನೂ ತಿಳಿಸಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸುವುದು, ರಾಷ್ಟ್ರದ ಸಂಪತ್ತನ್ನು ರಕ್ಷಿಸುವುದು, ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಯುವಕರು ಸಂವಿಧಾನದ ಆಶಯಗಳನ್ನು ಅರಿತು ಜೀವನದಲ್ಲಿ ಪಾಲಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಸಂದರ್ಭದಲ್ಲಿ ಸಂವಿಧಾನ ದಿನಾಚರಣೆಯನ್ನು ಅಂಗವಾಗಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಗಳ ತಾಲ್ಲೂಕು ಮಟ್ಟದ ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್, ಜಿಲ್ಲಾ ಸಫಾಯಿ ಕರ್ಮಚಾರಿ ಸಮಿತಿ ಸದಸ್ಯ ಲಕ್ಷ್ಮಣರಾಜು, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜಗದೀಶ್ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.