
Sidlaghatta : ಶಿಡ್ಲಘಟ್ಟ ತಾಲೂಕಿನಲ್ಲಿ ರೈತರು ಸಲ್ಲಿಸಿರುವ 5,823 ಸರ್ವೆ ಅರ್ಜಿಗಳು ಇನ್ನೂ ವಿಲೇವಾರಿಯಾಗದೆ ಬಾಕಿ ಉಳಿದಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ರೈತ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ರೈತ ಸಂಘದ ಮುಖಂಡರು, “ಸದ್ಯದಲ್ಲೇ ಮುಂಗಾರು ಮಳೆ ಆರಂಭವಾಗಲಿದೆ. ಬಿತ್ತನೆ ಕಾರ್ಯ ಶುರುವಾದ ನಂತರ ಜಮೀನುಗಳ ಅಳತೆ ಕಾರ್ಯ ಮಾಡುವುದು ಅಸಾಧ್ಯ. ರೈತರು ತಮ್ಮ ಜಮೀನುಗಳ ಹದ್ದುಬಸ್ತು, 11-ಇ, ಮತ್ತು ತತ್ಕಾಲ್ ಪೋಡಿ ಅರ್ಜಿಗಳಿಗಾಗಿ ಕಚೇರಿಗೆ ಅಲೆದಾಡುತ್ತಿದ್ದಾರೆ. ಕೃಷಿ ಚಟುವಟಿಕೆಗಳು ಆರಂಭಕ್ಕೂ ಮುನ್ನವೇ ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಿಕೊಡಬೇಕು,” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಭೂದಾಖಲೆಗಳ ಅಧಿಕಾರಿ ವಸಂತ್, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೆಳ್ಳೂಟಿ ಮುನಿಕೆಂಪಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ನಲ್ಲೇನಹಳ್ಳಿ ಸುಬ್ರಮಣಿ, ಕಾರ್ಯಾಧ್ಯಕ್ಷ ಎಚ್.ಎನ್. ಕದಿರೇಗೌಡ, ಜಿಲ್ಲಾ ಸಂಚಾಲಕ ಹುಸೇನ್ ಸಾಬ್, ತಾಲೂಕು ಅಧ್ಯಕ್ಷ ಮುನೇಗೌಡ, ಕಾರ್ಯದರ್ಶಿ ನವೀನ್ ಚಾರ್ಯ, ಉಪಾಧ್ಯಕ್ಷ ಡಿ.ವಿ. ನಾರಾಯಣಸ್ವಾಮಿ ಹಾಗೂ ವಿವಿಧ ಗ್ರಾಮಗಳ ರೈತ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.