Sidlaghatta : ತಾಲ್ಲೂಕಿನ ರೈತರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರ ಮತ್ತು ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ವತಿಯಿಂದ ಶುಕ್ರವಾರ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಶಿಡ್ಲಘಟ್ಟ ನಗರದ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಅನುಪಸ್ಥಿತಿಯಲ್ಲಿ ಶೀರೆಸ್ತೇದಾರ್ ಹಾಸೀಯ ಅವರಿಗೆ ಮನವಿ ಸಲ್ಲಿಸಿದ ನಂತರ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್ ಮಾತನಾಡಿ, ಬಯಲು ಸೀಮೆಯಲ್ಲಿ ಯಾವುದೇ ನದಿ ನಾಲೆಗಳಿಲ್ಲದೆ ಸುಮಾರು 1200 ರಿಂದ 1800 ಅಡಿ ಬೋರ್ ವೆಲ್ ಕೊರೆದು ಸಿಕ್ಕ ಅಲ್ಪಸ್ವಲ್ಪ ನೀರಿನಲ್ಲಿ ಕಷ್ಟಪಟ್ಟು ರೇಷ್ಮೆ, ಹಾಲು, ಹೂವು, ಹಣ್ಣು, ತರಕಾರಿ, ರಾಗಿ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದು, ಬೆಳೆಗಳಿಗೆ ಸರಿಯಾದ ಧಾರಣೆ ಇಲ್ಲದ ರೈತರು ದಿಕ್ಕು ತೋಚದ ಕಂಗಾಲಾಗಿದ್ದಾರೆ ಎಂದರು.
ಸರ್ಕಾರ ದೊಡ್ಡ ರೈತ ಸಣ್ಣ ರೈತ ಎಂಬ ತಾರತಮ್ಯ ಇಲ್ಲದೆ ಎಲ್ಲಾ ರೈತರಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಮಾಡಬೇಕು. ಹಾಲಿನ ಪ್ರೋತ್ಸಾಹ ಧನ ಸುಮಾರು ತಿಂಗಳುಗಳಿಂದ ನೆನೆಗುದಿಗೆ ಬಿದ್ದಿದ್ದು ಆ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಎಚ್: ಎನ್ ವ್ಯಾಲಿ ನೀರಿನ ಎರಡನೆಯ ಹಂತ ಪ್ರಾರಂಭಿಸಿ ಬಾಕಿ ಇರುವ 55 ಕೆರೆಗಳನ್ನು ತುಂಬಿಸಬೇಕು.
ರೈತ ಕಾರ್ಮಿಕರು ಮತ್ತು ರೇಷ್ಮೆ ನೂಲು ಬಿಚ್ಚಾಣಿಕೆ ಮಾಡುವ ಕಾರ್ಮಿಕರು ತಾಲ್ಲೂಕಿನಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅವರ ಅರೋಗ್ಯ ದೃಷ್ಟಿಯಿಂದ ತಾಲ್ಲೂಕು ಕೇಂದ್ರದಲ್ಲಿ ಇ.ಎಸ್.ಐ ಆಸ್ಪತ್ರೆಯನ್ನು ಪ್ರಾರಂಭಿಸಬೇಕು. ಸುಮಾರು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಬಗರ್ ಹುಕುಂ ಸಾಗುವಳಿ ಸಭೆಯನ್ನು ನಡೆಸಿ ರೈತರಿಗೆ ಸಾಗುವಳಿ ನೀಡಬೇಕು.
ಪೋಡಿ ರಹಿತ ತಾಲ್ಲೂಕನ್ನಾಗಿ ಮಾಡಲು ಪಿ ನಂಬರ್ ತೆಗೆದು, ದುರಸ್ತಿ ಮಾಡಿ ರೈತರಿಗೆ ಖಾತೆ ಮಾಡಿಕೊಡಬೇಕು. ರಾಗಿ ಖರೀದಿ ಕೇಂದ್ರದಿಂದ ರೈತರಿಗೆ ಬಾಕಿ ಇರುವ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಕೆರೆಗಳಿಗೆ ನೀರು ತುಂಬಲು ಆಧಾರವಾಗಿರುವ ರಾಜ ಕಾಲುವೆ ಮತ್ತು ಪೋಷಕ ಕಾಲುವೆಗಳಲ್ಲಿ ಹೂಳುತೆಗೆದು, ರೈತರ ಹೊಲ ಮತ್ತು ಜಮೀನುಗಳಿಗೆ ಹೋಗುವ ರಸ್ತೆ ಮತ್ತು ಕಾಲು ದಾರಿಗಳನ್ನು ಗುರುತಿಸಿ ದುರಸ್ತಿ ಮಾಡಲು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ವೇಣುಗೋಪಾಲ್, ಜಿಲ್ಲಾ ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ, ಖಜಾಂಚಿ ದೇವರಾಜ್, ತಾಲ್ಲೂಕು ಉಪಾಧ್ಯಕ್ಷರಾದ ರಮೇಶ್, ರಾಮಚಂದ್ರಪ್ಪ, ಬೀರಪ್ಪ, ಜಂಟಿ ಕಾರ್ಯದರ್ಶಿ ಅಶ್ವಥ್, ದೇವರಾಜ್, ಮದ್ದರೆಡ್ಡಿ, ಆಂಜಿನಪ್ಪ, ಅಶ್ವತ್ಥಪ್ಪ ಹಾಜರಿದ್ದರು.