
Sidlaghatta : ನೀರಿಲ್ಲದೆ ಜೀವನವಿಲ್ಲ ಎಂಬ ಮಾತು ಎಷ್ಟು ಸತ್ಯವೋ, ನೀರನ್ನು ವ್ಯರ್ಥ ಮಾಡುವುದು ಅಷ್ಟೇ ದೊಡ್ಡ ಅಪರಾಧವಾಗಿದೆ. ನಾವು ಮನೆಯ ಹಂತದಲ್ಲೇ ನೀರನ್ನು ಉಳಿಸಲು ಮುಂದಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ತಿಳಿಸಿದರು.
ನಗರದ ನ್ಯಾಯಾಲಯದ ಸಭಾಂಗಣದಲ್ಲಿ ಶುಕ್ರವಾರ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಡೆದ “ವಿಶ್ವ ಗ್ರಾಹಕರ ಹಕ್ಕುಗಳ ದಿನ ಮತ್ತು ವಿಶ್ವ ಜಲ ದಿನ”ದ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ದೈನಂದಿನ ಜೀವನದಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಮನೆಗಳಲ್ಲಿಯೇ ಸಾಕಷ್ಟು ನೀರನ್ನು ಉಳಿಸಬಹುದು. ನೀರಿನ ಮರುಬಳಕೆ, ಮಳೆ ನೀರು ಕೊಯ್ಲು ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು.
“ಹನಿ ಹನಿ ಕೂಡಿದರೆ ಹಳ್ಳ” ಎನ್ನುವಂತೆ, ನಾವು ವ್ಯರ್ಥ ಮಾಡುವ ಪ್ರತಿಯೊಂದು ಹನಿಯೂ ಭವಿಷ್ಯದ ದೊಡ್ಡ ಬರಗಾಲಕ್ಕೆ ಕಾರಣವಾಗಬಹುದು. ನೀರಿನ ಸಂರಕ್ಷಣೆ ಕೇವಲ ಸರ್ಕಾರದ ಕೆಲಸವಲ್ಲ, ಅದು ಪ್ರತಿ ಮನೆಯ ಜವಾಬ್ದಾರಿಯಾಗಿದೆ. ಮುಂದಿನ ಪೀಳಿಗೆಗೆ ನೀರನ್ನು ಉಳಿಸಿಕೊಡುವುದು ನಮ್ಮ ಆದ್ಯ ಕರ್ತವ್ಯವಾಗಲಿ ಎಂದು ಹೇಳಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಸುಕನ್ಯಾ.ಸಿ.ಎಸ್. ಮಾತನಾಡಿ, ಎಚ್ಚೆತ್ತ ಗ್ರಾಹಕನೇ ಸದೃಢ ದೇಶದ ಆಧಾರ. ನಾವು ದುಡಿಮೆಯಿಂದ ಸಂಪಾದಿಸಿದ ಹಣದಿಂದ ಖರೀದಿಸುವ ಸಾಮಾನುಗಳು ನಮ್ಮ ಸುರಕ್ಷತೆಗೆ ಧಕ್ಕೆ ತರುವಂತಿಲ್ಲ. ಮೋಸವಾದರೆ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿ ನ್ಯಾಯ ಪಡೆಯಿರಿ. ನಮ್ಮ ಹಕ್ಕುಗಳನ್ನು ತಿಳಿದುಕೊಂಡು, ಜಾಗೃತರಾಗಿ ಎಂದು ಹೇಳಿದರು.
ಇಂದಿನ ಡಿಜಿಟಲ್ ಯುಗದಲ್ಲಿ ಆನ್‌ಲೈನ್ ಶಾಪಿಂಗ್ ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲಿ ನಕಲಿ ವಸ್ತುಗಳು, ತಪ್ಪುದಾರಿಗೆಳೆಯುವ ಜಾಹೀರಾತುಗಳು ಮತ್ತು ಡೇಟಾ ಸುರಕ್ಷತೆಯ ಬಗ್ಗೆ ಗ್ರಾಹಕರು ಹೆಚ್ಚು ಎಚ್ಚರದಿಂದಿರಬೇಕು. “ಗ್ರಾಹಕನೇ ಮಾರುಕಟ್ಟೆಯ ರಾಜ” ಎಂಬ ಮಾತು ನಿಜವಾಗಬೇಕಾದರೆ, ನಮಗೆ ನಮ್ಮ ಹಕ್ಕುಗಳ ಅರಿವಿರಬೇಕು ಎಂದರು.
ಸಹಾಯಕ ಸರ್ಕಾರಿ ಅಭಿಯೋಜಕರಾದ ಮೊಹಮ್ಮದ್ ಖಾಜಾ, ರೂಪ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ.ಭಾಸ್ಕರ್, ಆರ್.ಮುನಿಶಾಮಿಗೌಡ, ಸತ್ಯನಾರಾಯಣ, ಶಾಬುದ್ದೀನ್, ದ್ಯಾವಪ್ಪ, ರಾಘವೇಂದ್ರಗೌಡ ಹಾಜರಿದ್ದರು.