
Melur, Sidlaghatta : ಯುವಕರು, ಮೊಬೈಲ್, ಸಾಮಾಜಿಕ ಜಾಲತಾಣಗಳನ್ನು ಬಿಟ್ಟು, ದೈಹಿಕ ಆರೋಗ್ಯವನ್ನು ವೃದ್ಧಿಸುವಂತಹ ಕ್ರೀಡಾಕೂಟಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದರಿಂದ ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ ಎಂದು ಚಿತ್ರನಟ ಮಹಾಂತೇಶ್ ಹೇಳಿದರು.
ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ, ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ, ಓಂಕಾರ್ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ್ದ ಡಾ.ರಾಜ್ ಕಪ್ ಕ್ರಿಕೆಟ್ ಟೂರ್ನಿಮೆಂಟ್ ನಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನಗಳು ವಿತರಣೆ ಮಾಡಿ ಅವರು ಮಾತನಾಡಿದರು.
ಯುವಕರು, ದುಶ್ವಟಗಳಿಗೆ ಬಲಿಯಾಗದೇ, ಕಲೆ, ಸಾಹಿತ್ಯ, ನಮ್ಮ ಸಂಸ್ಕೃತಿ, ಕ್ರೀಡೆಗಳು, ಸೇರಿದಂತೆ ದೇಶಿಯ ಸೊಗಡನ್ನು ಮೈಗೂಡಿಸಿಕೊಳ್ಳುವ ಮೂಲಕ ದೈಹಿಕ ಆರೋಗ್ಯವನ್ನು ಹೊಂದಿಕೊಳ್ಳುವುದರ ಜೊತೆಗೆ, ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಎ.ಉಮೇಶ್ ಮಾತನಾಡಿ, ಪ್ರತಿ ವರ್ಷ ಯುವಕರು, ಮೇಲೂರು ಗ್ರಾಮದಲ್ಲಿ ಕ್ರೀಡಾಕೂಟಗಳ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ, ಸಮಾಜಕ್ಕೆ ಉತ್ತಮ ಸಂದೇಶವನ್ನು ರವಾನಿಸುತ್ತಿದ್ದಾರೆ. ಇದರ ಜೊತೆಗೆ ಧಾರ್ಮಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ಇಂತಹ ಬೆಳವಣಿಗೆಗಳು ಯುವಕರಲ್ಲಿ ಒಗ್ಗಟ್ಟು ಮೂಡಿಸುವುದರ ಜೊತೆಗೆ,ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಹೆಚ್ಚು ಸಹಕಾರಿಯಾಗಲಿವೆ. ಯುವಕರು, ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಕ್ರೀಡಾಕೂಟದಲ್ಲಿ ಭಾಗವಹಿಸುವುದಷ್ಟೆ ಮುಖ್ಯವಾಗಬೇಕು ಎಂದರು.
ನೇತಾಜಿ ಕ್ರಿಕೆಟರ್ಸ್ ಚಿಂತಾಮಣಿ ತಂಡ, ಪ್ರಥಮ ಬಹುಮಾನ, ಆಕರ್ಷಕ ಟ್ರೋಫಿ, 1 ಲಕ್ಷ ನಗದು, ಹಾಗೂ ಕೆ.ವೈ.ಸಿ.ಸಿ ಹೊಸಕೋಟೆ ತಂಡ, ದ್ವಿತೀಯ ಬಹುಮಾನ ಆಕರ್ಷಕ ಟ್ರೋಫಿ 50 ಸಾವಿರ ನಗದು ಪಡೆದುಕೊಂಡರು. ತೀರ್ಪುಗಾರರಾಗಿ ಹಿತೇಶ್, ಲಕ್ಷ್ಮಣ್, ಕಾರ್ಯನಿರ್ವಹಿಸಿದರು.
ಮುಖಂಡರಾದ ರವಿಪ್ರಸಾದ್, ಹತೀಕ್, ಎಂ.ಜೆ.ಶ್ರೀನಿವಾಸ್, ಸಿ.ರಿಜ್ವಾನ್, ದೇವನಹಳ್ಳಿ ಸಾಗರ್, ಶ್ರೀನಿವಾಸ್ ದಾಸ್, ಮಹೇಶ್, ಶಿವಕುಮಾರ್, ರಾಜೇಶ್, ಎಚ್.ಆರ್. ಪವನ್, ಗೌತಮ್, ದೇವರಾಜ್, ಪ್ರಸನ್ನ, ಅರುಣ್ ಕುಮಾರ್, ಧನುಷ್, ಶ್ರೀನಾಥ್ ಹಾಜರಿದ್ದರು.