
Melur, Sidlaghatta : ವಿದ್ಯಾರ್ಥಿಯ ಜೀವನದಲ್ಲಿ ಒಂದು ಉತ್ತಮವಾದ ಗುರಿಯನ್ನು ಇಟ್ಟುಕೊಂಡು, ಶ್ರದ್ಧೆ, ಭಕ್ತಿಯಿಂದ ವಿದ್ಯೆ ಕಲಿತರೆ ಯಶಸ್ಸು ತಾನಾಗಿಯೇ ಬರುತ್ತದೆ ಎಂದು ಶಿಕ್ಷಕ ಆರ್.ಟಿ.ವೇಣುಗೋಪಾಲ್ ಹೇಳಿದರು.
ತಾಲ್ಲೂಕಿನ ಮೇಲೂರು ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ, 2010-11 ನೇ ಸಾಲಿನ ವಿದ್ಯಾರ್ಥಿಗಳಿಂದ ಆಯೋಜಿಸಲಾಗಿದ್ದ ಗುರುವಂದನ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮೀಲನ-2026 ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪ್ರಯೋಜಕರಾಗಿ, ಸಮಾಜಕ್ಕೆ ಉಪಕಾರ ಮಾಡುವಂತಹ ವ್ಯಕ್ತಿಗಳಾದಾಗ ಮಾತ್ರವೇ, ಶಿಕ್ಷಕನ ಜೀವನ ಸಾರ್ಥಕವಾಗುತ್ತದೆ ಎಂದರು.
ಹಿರಿಯ ಶಿಕ್ಷಕ ಜಿ.ಆರ್.ರಂಗಪ್ಪ ಮಾತನಾಡಿ, ಸ್ವಾರ್ಥ ತುಂಬಿರುವ ಸಮಾಜದಲ್ಲಿ, ಇಂದಿಗೂ ಗುರುಗಳನ್ನು ನೆನಪಿನಲ್ಲಿಟ್ಟುಕೊಂಡು, ಅವರು ಕಲಿಸಿರುವ ವಿದ್ಯೆಯನ್ನು ಸ್ಮರಿಸುವಂತಹ ವಿದ್ಯಾರ್ಥಿಗಳಿರುವುದು, ನಿಮ್ಮೆಲ್ಲರಿಗೂ ವಿದ್ಯೆ ಕಲಿಸಿದ ನಮ್ಮೆಲ್ಲರ ಸೌಭಾಗ್ಯವಾಗಿದೆ. ನೀವೆಲ್ಲರು ಉತ್ತಮ ಪ್ರಜೆಗಳಾಗಬೇಕು. ನಿಮ್ಮ ಮಕ್ಕಳಿಗೆ ವಿದ್ಯೆಯ ಜೊತೆಯಲ್ಲಿ ಉತ್ತಮ ಸಂಸ್ಕಾರವನ್ನೂ ಕಲಿಸಬೇಕು ಎಂದರು.
ಮೇಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಎ.ಉಮೇಶ್ ಮಾತನಾಡಿ, ಸಮಾಜದಲ್ಲಿ ನಾವು ಎಲ್ಲವನ್ನೂ ಪಡೆಯಬಹುದು, ಆದರೆ, ತಂದೆ-ತಾಯಿ, ವಿದ್ಯೆ ಕಲಿಸಿದ ಗುರುಗಳನ್ನು ಪರ್ಯಾಯವಾಗಿ ಪಡೆಯುವುದಕ್ಕೆ ಸಾಧ್ಯವಿಲ್ಲ. ಶಿಕ್ಷಕರು ನಮ್ಮ ಜೀವನದಲ್ಲಿ ಆದರ್ಶವಾಗಬೇಕು. ಅವರು ಕಲಿಸಿದ ವಿದ್ಯೆಯಿಂದ ನಾವು ಇಲ್ಲಿ ವ್ಯಕ್ತಿಗಳಾಗಿದ್ದೇವೆ. ಅವರ ಆಶೀರ್ವಾದ ಪಡೆಯುವ ಮೂಲಕ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ಗುರುವಂದನಾ ಕಾರ್ಯಕ್ರಮದ ಅಂಗವಾಗಿ, ಶಿಕ್ಷಕರನ್ನು ಸನ್ಮಾನಿಸಿ, ಗೌರವಿಸಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ನಂದಿನಿ, ಮುಖ್ಯಶಿಕ್ಷಕ ಎಚ್.ಎಂ.ಭಾಸ್ಕರ್, ಶಿಕ್ಷಕರಾದ ಆರ್.ಮಂಜುಳಾ, ಸಿ.ಕೆಂಪಣ್ಣ, ಶಿವಕುಮಾರ್ ಬಾಬು ಪಟ್ಟೇದ್, ಕೆ.ಆರ್.ಆಶಾ, ಎಂ.ಸಿ.ರೇಣುಕಾ, ಜೆ.ಸುಷ್ಮಾ, ಸಿ.ಸುಜಾತ, ಮಾಲತೇಶ್ ಕೊರಚರ, ಡಿ.ವಿದ್ಯಾ, ಎಂ.ಬಿ.ಪೊನ್ನಮ್ಮ, ಎ.ನಾರಾಯಣಸ್ವಾಮಿ, ಗಾಯತ್ರಿ, ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.