Sidlaghatta : ಸಹಕಾರ ಬ್ಯಾಂಕಿನ ಆರ್ಥಿಕ ಸ್ಥಿತಿ ಸುಧಾರಿಸಿ ಹೆಚ್ಚಿನ ಸಂಖ್ಯೆಯ ರೈತರಿಗೆ ಸಾಲ ನೀಡುವಂತಾಗಬೇಕಾದರೆ ಸಾಲ ಪಡೆದ ರೈತರು ಸಕಾಲಕ್ಕೆ ಸಾಲದ ಹಣವನ್ನು ವಾಪಸ್ ಮಾಡಬೇಕು ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದಲ್ಲಿನ ಪಿ.ಎಲ್.ಡಿ ಬ್ಯಾಂಕ್ ಆವರಣದಲ್ಲಿ ಶುಕ್ರವಾರ PLD Bank ನಿಂದ ನಿರ್ಮಿಸುವ ಅಂಗಡಿ ಮಳಿಗೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸಾಕಷ್ಟು ರೈತರಲ್ಲಿ ಇಂದಲ್ಲ ಮುಂದೊಂದು ದಿನ ಸರ್ಕಾರ ಸಾಲ ಮನ್ನಾ ಮಾಡುತ್ತದೆ ಎನ್ನುವ ಭಾವನೆ ಇದೆ. ಜತೆಗೆ ಕೆಲ ಜನಪ್ರತಿನಿಗಳು ಕೂಡ ಸಾಲಗಾರ ರೈತರಲ್ಲಿ ಇಂತದ್ದೊಂದು ಭಾವನೆಯನ್ನು ತುಂಬುವ ಕಾರಣಕ್ಕೆ ಕೆಲ ರೈತರು ಸಾಲವನ್ನು ಸಕಾಲಕ್ಕೆ ಕಟ್ಟುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರೈತರು ಸಾಲವನ್ನು ಸಕಾಲಕ್ಕೆ ಕಟ್ಟಲು ಸಿದ್ದರಿದ್ದು ಬ್ಯಾಂಕ್ ನಿರ್ದೇಶಕರು ಮತ್ತು ಜನಪ್ರತಿನಿಗಳು ರೈತರ ಮನವೊಲಿಸಿ ಸಾಲವನ್ನು ವಸೂಲಿ ಮಾಡಬೇಕು, ಬ್ಯಾಂಕ್ ನ ಆರ್ಥಿಕ ಸ್ಥಿತಿ ಇದರಿಂದ ಸುಧಾರಿಸಿ ಇನ್ನಷ್ಟು ರೈತರಿಗೆ ಕೃಷಿ ಸಾಲ ನೀಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಬ್ಯಾಂಕ್ ನ ಅಧ್ಯಕ್ಷರಾದಿಯಾಗಿ ಎಲ್ಲ ನಿರ್ದೇಶಕರು ಸೇರಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕಾರಣ ಹಲವು ವರ್ಷಗಳ ನಂತರ ಸಾಲ ವಸೂಲಾತಿ ಪ್ರಮಾಣ ಹೆಚ್ಚಾಗಿದ್ದು ಖುಷಿ ತಂದಿದೆ. ಇದೇ ರೀತಿಯ ಅಧ್ಯಕ್ಷ ರಾಮಚಂದ್ರ ನೇತೃತ್ವದಲ್ಲಿ ಎಲ್ಲ ನಿರ್ದೇಶಕರು ಉತ್ತಮವಾಗಿ ಕಾರ್ಯನಿರ್ವಹಿಸಿ ರೈತರಿಗೆ ಅನುಕೂಲ ಮಾಡಿಕೊಡಿ ಎಂದು ಮನವಿ ಮಾಡಿದರು.
ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ, ಆರ್ಥಿಕ ಅಭಿವೃದ್ದಿ ವಿಚಾರದಲ್ಲಿ ಸಣ್ಣ ಸಣ್ಣ ಉಳಿತಾಯ, ಸಣ್ಣ ಪ್ರಮಾಣದ ಹಣವನ್ನು ಸಹ ನಾವು ನಿರ್ಲಕ್ಷಿಸಬಾರದು ಎಂದರು.
ರಾಜ್ಯದಲ್ಲಿ ಸಾಕಷ್ಟು ಸಹಕಾರಿ ಬ್ಯಾಂಕುಗಳು ತನ್ನದೇ ಆದ ಸ್ವಂತ ಆದಾಯದ ಮೂಲಗಳನ್ನು ಹೊಂದಿದ್ದು ಲಕ್ಷಾಂತರ ಕೋಟ್ಯಂತರ ರೂಪಾಯಿಗಳ ಹಣ ಹೊಂದಿದೆ ಎಂದು ವಿವರಿಸಿದರು.
ಇದೀಗ ಎರಡು ಅಂಗಡಿಗಳ ನಿರ್ಮಾಣ ಮಾಡಲಿದ್ದು ಸಣ್ಣ ಮೊತ್ತದ ಬಾಡಿಗೆ ಹಣ ಬಂದರೂ ಮುಂದಿನ ದಿನಗಳಲ್ಲಿ ಅದು ದುಪ್ಪಟ್ಟು ಆಗಲಿದೆ, ಎಲ್ಲ ನಿರ್ದೇಶಕರು ಸೇರಿ ಬ್ಯಾಂಕ್ ನ್ನು ಆರ್ಥಿಕವಾಗಿ ಸಬಲೀಕರಣ ಮಾಡಬೇಕಿದೆ ಎಂದು ಕೋರಿದರು.
ಬ್ಯಾಂಕ್ ನ ಅಧ್ಯಕ್ಷ ದಿಬ್ಬೂರಹಳ್ಳಿ ರಾಮಚಂದ್ರ, ಹಿರಿಯ ನಿರ್ದೇಶಕ ಬಂಕ್ ಮುನಿಯಪ್ಪ ಅವರು ಶಾಸಕ ಬಿ.ಎನ್.ರವಿಕುಮಾರ್ ಅವರಿಗೆ ಮನವಿ ಸಲ್ಲಿಸಿ ಪಿ.ಎಲ್.ಡಿ ಬ್ಯಾಂಕ್ ನ ಈಗಿನ ಕಟ್ಟದ ಶಿಥಿಲಗೊಂಡಿದ್ದು ದುರಸ್ತಿಗಾಗಿ ಶಾಸಕರ ಅನುದಾನದಲ್ಲಿ 10 ಲಕ್ಷ ರೂಗಳನ್ನು ನೀಡಬೇಕೆಂದು ಮನವಿ ಮಾಡಿದರು.
ಜತೆಗೆ ಹನುಮಂತಪುರ ಬಳಿ ಹಲವು ಸರಕಾರಿ ಇಲಾಖೆಗಳಿಗೆ ನಿವೇಶನ ನೀಡಿದ್ದು ಅಲ್ಲಿ ಪಿ.ಎಲ್.ಡಿ ಬ್ಯಾಂಕ್‌ಗೆ ಒಂದು ಎಕರೆ ಜಮೀನು ನೀಡುವಂತೆ ಈಗಾಗಲೆ ಮನವಿ ಮಾಡಿದ್ದು ಜಮೀನು ಮಂಜೂರು ಮಾಡಿಸಿಕೊಡಬೇಕೆಂದು ಮನವಿ ಪತ್ರವನ್ನು ಸಲ್ಲಿಸಿದರು. ಬ್ಯಾಂಕ್ ನ ಅಡಳಿತ ಮಂಡಳಿಯಿಂದ ಶಾಸಕ ರವಿಕುಮಾರ್ ಮತ್ತು ಯಲವಾರ ಸೊಣ್ಣೇಗೌಡ ಅವರನ್ನು ಸನ್ಮಾನಿಸಲಾಯಿತು.
ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ದಿಬ್ಬೂರಹಳ್ಳಿ ರಾಮಚಂದ್ರ, ಉಪಾಧ್ಯಕ್ಷ ನಾರಾಯಣಪ್ಪ, ನಿರ್ದೇಶಕರಾದ ಬಂಕ್ ಮುನಿಯಪ್ಪ, ಸುರೇಶ್, ನಾರಾಯಣಸ್ವಾಮಿ, ಸುನಂದಮ್ಮ, ವ್ಯವಸ್ಥಾಪಕ ನಗರಸಭೆ ಸದಸ್ಯರಾದ ಅನಿಲ್ ಕುಮಾರ್, ಮಂಜುನಾಥ್, ಫುಡ್ ಮನೋಹರ್, ಮುರಳಿ, ಕೆ.ಬಿ.ಮಂಜುನಾಥ್ ಹಾಜರಿದ್ದರು.