Sidlaghatta : ಶಿಡ್ಲಘಟ್ಟ ನಗರದ 25ನೇ ವಾರ್ಡ್ ನ ತೈಬಾನಗರದಲ್ಲಿರುವ ಮಸ್ಜಿದ್ ಎ ಗೌಸ್ ಅಜಂ ಮಸೀದಿ ಮುಂಭಾಗದಲ್ಲಿ ಯೂತ್ ಕಮಿಟಿ ವತಿಯಿಂದ ಪ್ರವಾದಿ ಮೊಹಮ್ಮದ್ ಪೈಗಂಬರ್ ಹಾಗೂ ಅವರ ಕುಟುಂಬಸ್ಥರಿಗೆ ಸಂಬಂಧಿಸಿದ ಪವಿತ್ರ ವಸ್ತುಗಳ ಸಾರ್ವಜನಿಕ ಪ್ರದರ್ಶನ ಏರ್ಪಡಿಸಲಾಗಿತ್ತು.
In English: Sidlaghatta’s Masjid-e-Ghouse Azam in Tybanagar hosted the town’s first-ever public exhibition of relics attributed to Prophet Muhammad and his family, brought from Tamil Nadu via Bengaluru at the local Youth Committee’s request, drawing large crowds of devotees.
ತಮಿಳುನಾಡಿನಿಂದ ಬೆಂಗಳೂರಿಗೆ ತರಲಾಗಿದ್ದ ಈ ಪವಿತ್ರ ವಸ್ತುಗಳನ್ನು ಶಿಡ್ಲಘಟ್ಟಕ್ಕೆ ತರಲು ಯೂತ್ ಕಮಿಟಿಯವರು ಮನವಿ ಮಾಡಿಕೊಂಡಿದ್ದು, ಅದರಂತೆ ಬೆಂಗಳೂರಿನಿಂದ ಶಿಡ್ಲಘಟ್ಟಕ್ಕೆ ತರಲಾಗಿದೆ ಎಂದು ಆಯೋಜಕರು ತಿಳಿಸಿದರು.
ಪೈಗಂಬರ್ ಅವರು ಬಳಸಿದ್ದರೆನ್ನಲಾದ ಉಡುಪುಗಳು, ಪಾದರಕ್ಷೆಗಳು ಸೇರಿದಂತೆ ಹಲವು ವಸ್ತುಗಳನ್ನು ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ಪೈಗಂಬರ್ ಅವರ ಪುತ್ರಿ ಹಜರತ್ ಫಾತಿಮಾ, ಅಳಿಯ ಹಜರತ್ ಅಲಿ ಹಾಗೂ ಮೊಮ್ಮಕ್ಕಳಾದ ಹಜರತ್ ಹಸನ್ ಮತ್ತು ಹಜರತ್ ಹುಸೇನ್ ಅವರ ಕಾಲಕ್ಕೆ ಸಂಬಂಧಿಸಿದವು ಎಂದು ಹೇಳಲಾಗುವ ಕೆಲವು ವಸ್ತುಗಳು ಮತ್ತು ಯುದ್ಧ ಸಾಮಗ್ರಿಗಳನ್ನೂ ಪ್ರದರ್ಶನದಲ್ಲಿ ಇರಿಸಲಾಗಿತ್ತು.
ಭಕ್ತಿಯ ಸಂಕೇತವಾಗಿ ಪವಿತ್ರ ವಸ್ತುಗಳು:
ಪ್ರವಾದಿ ಮೊಹಮ್ಮದ್ ಹಾಗೂ ಅವರ ಕುಟುಂಬ ಮತ್ತು ಸಹಚರರಿಗೆ ಸಂಬಂಧಿಸಿದ ವಸ್ತುಗಳನ್ನು ಮುಸ್ಲಿಂ ಸಮುದಾಯದ ಒಂದು ವರ್ಗದಲ್ಲಿ ಪವಿತ್ರ ಸ್ಮರಣಿಕೆಗಳಾಗಿ (ತಬರ್ರುಕಾತ್) ಗೌರವಿಸುವ ಪರಂಪರೆ ಇದೆ. ಇಂತಹ ವಸ್ತುಗಳ ದರ್ಶನದ ಮೂಲಕ ಪ್ರವಾದಿಯ ಜೀವನ, ಸರಳತೆ, ಮಾನವೀಯತೆ ಮತ್ತು ಅವರು ಬೋಧಿಸಿದ ಮೌಲ್ಯಗಳನ್ನು ಸ್ಮರಿಸುವುದು ಭಕ್ತರ ಉದ್ದೇಶವಾಗಿದೆ.
ಶಿಡ್ಲಘಟ್ಟದಲ್ಲಿ ಇಂತಹ ಪವಿತ್ರ ವಸ್ತುಗಳ ಸಾರ್ವಜನಿಕ ಪ್ರದರ್ಶನ ಇದೇ ಮೊದಲ ಬಾರಿ ಎಂದು ಆಯೋಜಕರು ಹೇಳಿದರು. ತಮಿಳುನಾಡಿನಿಂದ ಬೆಂಗಳೂರಿಗೆ ಬಂದಿದ್ದ ವಸ್ತುಗಳನ್ನು ಶಿಡ್ಲಘಟ್ಟಕ್ಕೂ ತರಿಸಬೇಕು ಎಂಬ ಸ್ಥಳೀಯರ ಮನವಿಯ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ನಗರಸಭೆಯ ಮಾಜಿ ಸದಸ್ಯ ರಿಯಾಜ್ ಪಾಷಾ ಮಾತನಾಡಿ, ಪೈಗಂಬರ್ ಅವರ ಪವಿತ್ರ ವಸ್ತುಗಳ ದರ್ಶನ ಪಡೆಯುವುದು ಭಕ್ತರಿಗೆ ಪುಣ್ಯದ ಅವಕಾಶವಾಗಿದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳು ಜನರಲ್ಲಿ ಭಕ್ತಿ, ಶಾಂತಿ, ಸಹೋದರತ್ವ ಹಾಗೂ ಸೌಹಾರ್ದತೆಯ ಭಾವನೆ ಬೆಳೆಸಲು ಸಹಕಾರಿಯಾಗುತ್ತವೆ. ಉತ್ತಮ ಮಳೆಯಾಗಿ ರೈತರಿಗೆ ಒಳಿತಾಗಲಿ ಎಂದು ಆಶಿಸಿದರು.
ಮಸೀದಿಯ ಸದರ್ ಸಾಬ್ ಅಮಾನುಲ್ಲ ಮಾತನಾಡಿ, ಪೈಗಂಬರ್ ಅವರ ಸರಳ ಜೀವನ ಮತ್ತು ಮಾನವೀಯ ಸಂದೇಶಗಳನ್ನು ನೆನಪಿಸುವ ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಸೌಹಾರ್ದತೆ ಹಾಗೂ ಪರಸ್ಪರ ಗೌರವದ ಮನೋಭಾವ ಬೆಳೆಸಲು ಪ್ರೇರಣೆ ನೀಡುತ್ತವೆ ಎಂದರು.
ಬಿ. ಕಲಿಮುಲ್ಲಾ, ಮುನೀರ್. ಜೆ.ಎಂ., ಎಜಾಜ್ ಅಹಮದ್, ಅಲ್ಲಾ ಬಕಾಶ್, ಯಾಸೀನ್ ಪಾಷಾ, ಸಲೀಂ ಪಾಷಾ, ಯೂತ್ ಕಮಿಟಿಯ ಪದಾಧಿಕಾರಿಗಳು, ಮಸೀದಿ ಆಡಳಿತ ಮಂಡಳಿ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸ್ಥಳೀಯ ಸಾರ್ವಜನಿಕರು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪವಿತ್ರ ವಸ್ತುಗಳ ದರ್ಶನ ಪಡೆದರು.

