Home News ತಾಲ್ಲೂಕಿನ ಮೊಟ್ಟ ಮೊದಲ ಸೈನ್ಸ್ ಫೋರಂ, “ಆರೋಹಿ ಸೈನ್ಸ್ ಕ್ಲಬ್” ಉದ್ಘಾಟನೆ

ತಾಲ್ಲೂಕಿನ ಮೊಟ್ಟ ಮೊದಲ ಸೈನ್ಸ್ ಫೋರಂ, “ಆರೋಹಿ ಸೈನ್ಸ್ ಕ್ಲಬ್” ಉದ್ಘಾಟನೆ

0
Sidlaghatta Science Forum Inaguration

ನಗರದ ಕೆ.ಎಚ್.ಬಿ ಕಾಲೋನಿಯ ನಿವೃತ್ತ ಶಿಕ್ಷಕ ಸುಂದರನ್ ಅವರ ಶ್ರೀನಿಲಯದಲ್ಲಿ ಭಾನುವಾರ ತಾಲ್ಲೂಕಿನ ಮೊಟ್ಟ ಮೊದಲ “ಸೈನ್ಸ್ ಫೋರಂ”, “ಆರೋಹಿ ಸೈನ್ಸ್ ಕ್ಲಬ್” ಅನ್ನು ಹಾಗೂ ಅದರ ಬ್ಲಾಗ್ ಅನ್ನು ಉದ್ಘಾಟಿಸಿ ನಾಗಾರ್ಜುನ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಂತೋಷ್ ಮಾತನಾಡಿದರು.   

ಮಕ್ಕಳು ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಯಾಕೆ, ಹೇಗೆ, ಎಲ್ಲಿ, ಯಾವಾಗ ಮುಂತಾದ ಪ್ರಶ್ನೆಗಳು ಮನದಲ್ಲಿ ಮೂಡುತ್ತಿದ್ದರೆ, ಉತ್ತರಕ್ಕಾಗಿ ಹುಡುಕಾಟ ನಡೆಸಿದಾಗ ವಿಜ್ಞಾನದ ಕೌತುಕಗಳು ಕಣ್ಮುಂದೆ ತೆರೆದುಕೊಳ್ಳುತ್ತವೆ. ಅದುವೇ ವಿಜ್ಞಾನದ ರಹದಾರಿ ಎಂದು ಅವರು ತಿಳಿಸಿದರು.

 ಈಗಿನ ಮಕ್ಕಳು ಪ್ರತಿಭಾವಂತರಿದ್ದಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ಬೇಕಿದೆ. ವಿಜ್ಞಾನದ ಪ್ರಯೋಗಗಳನ್ನು ಮಕ್ಕಳೇ ಸ್ವತಃ ಮಾಡುವ ವಾತಾವರಣವನ್ನು ರೂಪಿಸಬೇಕು. ಆಗ ಮಕ್ಕಳು ವಿಜ್ಞಾನವನ್ನು ಸಂತಸದಿಂದ ತಮ್ಮ ಬದುಕಿನ ಭಾಗವಾಗಿ ಸ್ವೀಕರಿಸುವರು ಎಂದರು.

 ತಾಲ್ಲೂಕು ಕೇಂದ್ರದಲ್ಲಿ “ಸೈನ್ಸ್ ಫೋರಂ” ಪ್ರಾರಂಭವಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಎಳೆಯರನ್ನು ವಿಜ್ಞಾನದೆಡೆಗೆ ಆಕರ್ಷಿಸುವ ಕೆಲಸವಾಗಲಿ. ವಿಜ್ಞಾನದ ಸಾಧಕರನ್ನು ಮಕ್ಕಳಿಗೆ ಪರಿಚಯಿಸುವ ಮೂಲಕ ಅವರಲ್ಲಿ ಜ್ಞಾನದ ಕಿಡಿಯನ್ನು ಹೊತ್ತಿಸಿ ವಿಜ್ಞಾನದ ಒಲಂಪಿಕ್ ಓಟಕ್ಕೆ ಯುವಪೀಳಿಗೆಯನ್ನು ಮುನ್ನಡೆಸಿ ಎಂದರು.

 ವರದನಾಯಕನಹಳ್ಳಿ ಸರ್ಕಾರಿ ಶಾಲೆಯ ವಿಜ್ಞಾನ ಶಿಕ್ಷಕ ಎಂ.ಎ.ರಾಮಕೃಷ್ಣ ಮಾತನಾಡಿ, ಬೆಳಗ್ಗೆಯಿಂದ ಸಂಜೆವರೆಗೂ ನಮ್ಮ ದಿನಚರಿ ಹಾಗೂ ಸುತ್ತಲಿನ ಪ್ರಕೃತಿಯಲ್ಲಿ ವಿಜ್ಞಾನ ಹಾಸುಹೊಕ್ಕಾಗಿರುತ್ತದೆ. ವಿದ್ಯಾರ್ಥಿಗಳಿಗೆ ಅದರೆಡೆಗೆ ಆಕರ್ಷಿಸುವುದು ನಾವು ಮಾಡಬೇಕಾದ ಕೆಲಸ. “ಆರೋಹಿ ಸೈನ್ಸ್ ಕ್ಲಬ್” ಮೂಲಕ ಈ ಕೆಲಸವಾಗಲಿ ಎಂದರು.

 “ಆರೋಹಿ ಸೈನ್ಸ್ ಕ್ಲಬ್” ಸಂಚಾಲಕ ಓಂ ದೇಶಮುದ್ರೆ ಮಾತನಾಡಿ, ವಿಜ್ಞಾನವನ್ನು ಸಂವಹನ ಮಾಧ್ಯಮಗಳ ಮೂಲಕ ಎಲ್ಲೆಡೆ ಪಸರಿಸುವ ಹಾಗೂ ವಿಜ್ಞಾನದೊಂದಿಗೆ ಒಂದಾಗುವ ಕಾರ್ಯವನ್ನು ಮಾಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದರು.

“ಆರೋಹಿ ಸೈನ್ಸ್ ಕ್ಲಬ್” ಸಹಸಂಚಾಲಕ ಅಜಿತ್ ಕೌಂಡಿನ್ಯ ಮಾತನಾಡಿ, ಜ್ಞಾನದಿಂದ ವಿಜ್ಞಾನದೆಡೆಗೆ ಸಾಗೋಣ ಎಂಬ ಮಾತಿನಂತೆ, ವಿಜ್ಞಾನಕ್ಕೆ ಸಂಬಂಧಿಸಿದಂತೆ ವಿವಿಧ ಚಟುವಟಿಕೆಗಳನ್ನು ಮಾಡುವ ಉದ್ದೇಶದಿಂದ “ಆರೋಹಿ ಸೈನ್ಸ್ ಕ್ಲಬ್” ಎಂಬ “ಸೈನ್ಸ್ ಫೋರಂ” ಪ್ರಾರಂಭಿಸಿದ್ದೇವೆ. ಇದರ ಬ್ಲಾಗ್ ಪ್ರಾರಂಭಿಸಿದ್ದು, ಶಾಲಾ ಮಕ್ಕಳು ಬರೆಯುವ ವಿಜ್ಞಾನದ ಲೇಖನಗಳನ್ನು ಪ್ರಕಟಿಸಲಾಗುವುದು. ನಾಲ್ಕು ಪುಟಗಳ ಇ ಪುಸ್ತಕ ಕೂಡ ಹೊರತರಲಾಗುವುದು. ಶಾಲೆಗಳಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಮಾಡಿ, ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಹುಟ್ಟಿಸುವ ಪ್ರಯತ್ನ ಮಾಡುತ್ತೇವೆ.

 ನಿವೃತ್ತ ಶಿಕ್ಷಕ ಸುಂದರನ್, ಕ್ರೆಸೆಂಟ್ ವಿದ್ಯಾಸಂಸ್ಥೆ ಕಾರ್ಯದರ್ಶಿ ತಮೀಮ್ ಅನ್ಸಾರಿ, ಶಿಕ್ಷಕ ಪ್ರಕಾಶ್, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಶಿಕ್ಷಕ ನಾಗಭೂಷಣ್, ಗೌಡನಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.  

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version