Home News ಸುಗಟೂರು ಸರ್ಕಾರಿ ಶಾಲೆಯ ಮಕ್ಕಳಿಂದ ನರ್ಸರಿ ಫಾರಂಗೆ ಭೇಟಿ

ಸುಗಟೂರು ಸರ್ಕಾರಿ ಶಾಲೆಯ ಮಕ್ಕಳಿಂದ ನರ್ಸರಿ ಫಾರಂಗೆ ಭೇಟಿ

0
Sidlaghatta sugaturu J Venkatapura Eco Club

ತಾಲ್ಲೂಕಿನ ಜೆ.ವೆಂಕಟಾಪುರ ಗ್ರಾಮದ ವಿಎಲ್‌ಪಿ ಯೋಗಿತಾ ಫಾರಂ ನರ್ಸರಿಗೆ ಭೇಟಿನೀಡಿದ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಂದರ್‌ಲಾಲ್ ಬಹುಗುಣ ಇಕೋಕ್ಲಬ್‌ನ ಸದಸ್ಯಮಕ್ಕಳೊಂದಿಗೆ ಪರಿಸರ ಸಂರಕ್ಷಣೆ ಕುರಿತ ಸಂವಾದದಲ್ಲಿ ಪಾಲ್ಗೊಂಡು ಜೆ.ವೆಂಕಟಾಪುರ ಗ್ರಾಮದ ವಿಎಲ್‌ಪಿ ಯೋಗಿತಾ ನರ್ಸರಿ ಫಾರಂನ ನಿರ್ದೇಶಕ ಪಾಪರಾಜು ಮಾತನಾಡಿದರು.

ಪ್ರಕೃತಿಯಲ್ಲಿ ಹೆಚ್ಚುತ್ತಿರುವ ಅಸಮತೋಲನ ಮತ್ತು ಅಕಾಲಿಕ ಘಟನೆಗಳ ನಿವಾರಣೆಗೆ ಕಡ್ಡಾಯವಾಗಿ ಮರಗಿಡಗಳನ್ನು ಬೆಳೆಸಿ ಪರಿಸರ ಉಳಿಸುವುದೊಂದೇ ಅನಿವಾರ್ಯವಾದ ಮಾರ್ಗವಾಗಿದೆ. ಪರಿಸರ ಸಂರಕ್ಷಣೆಯು ದಿನನಿತ್ಯದ ಚಟುವಟಿಕೆಯಂತಾಗಿ ಎಲ್ಲರಲ್ಲಿಯೂ ಪರಿಸರದ ಕಾಳಜಿ ಪ್ರತಿ ಮನೆಯಿಂದಲೂ ಆರಂಭವಾಗಬೇಕು ಎಂದು ಅವರು ತಿಳಿಸಿದರು.

ಪೂರ್ವಜರಿಗೆ ತಾಂತ್ರಿಕತೆಯ ಅರಿವಿಲ್ಲದ್ದರಿಂದ ಪರಿಸರ ಸಂರಕ್ಷಣೆಯ ಜ್ಞಾನಹೊಂದಿದ್ದರು. ಬುದ್ದಿವಂತರಾದಂತೆಲ್ಲಾ ಪರಿಸರದ ಮೇಲಿನ ದಬ್ಬಾಳಿಕೆ ಹೆಚ್ಚುವಂತಾಗಿದೆ. ಪರಿಸರವನ್ನು ದೇವರ ರೂಪದಲ್ಲಿ ನೋಡುತ್ತಿದ್ದ ಪುರಾತನರ ಗುಣವು ಅನುಕರಣೀಯವಾದುದು. ದಿನೇ ದಿನೇ ಹೆಚ್ಚುತ್ತಿರುವ ಅರಣ್ಯನಾಶದಿಂದಾಗಿ ವಾತಾವರಣದಲ್ಲಿ ತಾಪಮಾನ ಹೆಚ್ಚುತ್ತಿದೆ. ಪ್ರಕೃತಿಯ ವೈಪರಿತ್ಯದಿಂದಾಗಿ ಆಗುತ್ತಿರುವ ವಿಕೋಪಗಳಿಗೆ ಮುಗ್ದ ಜನರು, ಅನೇಕ ಪ್ರಾಣಿಗಳು ಬಲಿಯಾಗುತ್ತಿವೆ ಎಂದರು.

ಸುಂದರಲಾಲ್ ಬಹುಗುಣ ಇಕೋಕ್ಲಬ್‌ನ ಸಂಯೋಜಕ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಮಾನವನು ಅತಿಯಾಸೆಯಿಂದ ಮಾಡುತ್ತಿರುವ ದುಷ್ಕೃತ್ಯಗಳು ಪ್ರಕೃತಿಯ ಮೇಲೆ ನಡೆಸುತ್ತಿರುವ ದಬ್ಬಾಳಿಕೆ ದೌರ್ಜನ್ಯಗಳಾಗಿವೆ, ಅನೇಕ ಪ್ರಾಣಿ, ಪಕ್ಷಿ ಸಂಕುಲಗಳು ವಿನಾಶದ ಅಂಚಿನಲ್ಲಿವೆ. ಆಮ್ಲಜನಕ, ನೀರನ್ನು ಕೊಂಡು ಬಳಸುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಗಳು ಪರಿಸರ ಸಂರಕ್ಷಣೆಗೆ ಗಂಭೀರವಾದ ಯೋಜನೆಗಳನ್ನು ಕಡ್ಡಾಯಗೊಳಿಸಬೇಕಿದೆ ಎಂದರು.

ನರ್ಸರಿ ಫಾರಂನ ಸಂಪನ್ಮೂಲವ್ಯಕ್ತಿ ಮದನ್ ಮಾತನಾಡಿ, ಮನೆಗಳ ಮೇಲೆ ಟೆರಾಸ್ ಮೇಲೆ ಗಿಡಗಳನ್ನು ಬೆಳೆಸಬಹುದು. ಬೇಸಿಗೆ ಹೆಚ್ಚುತ್ತಿರುವುದರಿಂದ ಪ್ರಾಣಿಪಕ್ಷಿಗಳಿಗೆ ನೀರುಣಿಸಲು ಅಗತ್ಯ ಕ್ರಮಕೈಗೊಳ್ಳಬೇಕು. ಗಿಡಗಳನ್ನು ಸ್ವಂತಮಕ್ಕಳಂತೆ ಪೋಷಿಸಬೇಕು. ಶುಭಸಮಾರಂಭಗಳ ವೇಳೆ ಸಸಿಗಳನ್ನು ನೆಡುವ, ವಿತರಿಸುವ ಹವ್ಯಾಸ ಅನುಸರಣೆಯಾಗಬೇಕು ಎಂದರು.

 ವಿವಿಧ ಜಾತಿ, ಪ್ರಭೇಧದ ಗಿಡಗಳ ಹೆಸರು, ವೈಜ್ಞಾನಿಕ ಹೆಸರು, ಬೆಳೆಸಿ ಸಂರಕ್ಷಿಸುವ ವಿಧಾನಗಳನ್ನು ವಿವರಿಸಲಾಯಿತು. ವಿದ್ಯಾರ್ಥಿಗಳು ಸ್ಥಳೀಯ ಗೋಶಾಲೆಗೆ ಭೇಟಿನೀಡಿ ಮಾಹಿತಿ ಪಡೆದರು.

 ಶಿಕ್ಷಕ ಎ.ಬಿ.ನಾಗರಾಜು, ಎಂ.ವೈ.ಲಕ್ಷ್ಮಯ್ಯ, ಶಿಕ್ಷಕಿ ಉಮಾದೇವಿ, ಎಚ್.ತಾಜೂನ್ ಹಾಜರಿದ್ದರು. 

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

Exit mobile version