
Sidlaghatta : ಭಾರತ ಚುನಾವಣಾ ಆಯೋಗದ ಸೂಚನೆಯಂತೆ ನಡೆಯುತ್ತಿರುವ ಎಸ್.ಐಆರ್ (ವಿಶೇಷ ಸಮಗ್ರ ಪರಿಷ್ಕರಣೆ) ಪ್ರಕ್ರಿಯೆಯಲ್ಲಿ “ಲಾಜಿಕಲ್ ಡಿಸ್ಕ್ರೆಪೆನ್ಸೀಸ್” ಹಾಗೂ “ನೋ ಮ್ಯಾಪಿಂಗ್”ಗೆ ಸಂಬಂಧಿಸಿದಂತೆ ನೋಟಿಸ್ ಪಡೆದ ಮತದಾರರ ಮೂಲ ದಾಖಲೆಗಳ ಪರಿಶೀಲನೆ ಭಾನುವಾರ ನಗರದ 11ನೇ ವಾರ್ಡ್ ನ ಬಿ.ಎಲ್.ಒ ಕಚೇರಿಯಲ್ಲಿ ನಡೆಯಿತು.
In English: Voters in Sidlaghatta’s Ward 11 who received discrepancy notices under the Election Commission’s Special Intensive Revision (SIR) submitted original documents for verification at the BLO office on Sunday, with 140 voters notified in the ward.
ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಹಿಂದಿನ ಮತದಾರರ ಪಟ್ಟಿಯಲ್ಲಿನ ವಿವರಗಳಿಗೆ ಹೊಂದಾಣಿಕೆಯಾಗದ ಅಥವಾ ವ್ಯತ್ಯಾಸ ಕಂಡುಬಂದಿರುವ ಮತದಾರರು, ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ಅಗತ್ಯ ದಾಖಲೆಗಳೊಂದಿಗೆ ಹಾಜರಾಗುವಂತೆ ಸೂಚಿಸಲಾಗಿತ್ತು.
11ನೇ ವಾರ್ಡ್ನಲ್ಲಿ ಒಟ್ಟು 140 ಮತದಾರರಿಗೆ ನೋಟಿಸ್ ನೀಡಲಾಗಿದ್ದು, ನೋಟಿಸ್ ಪಡೆದವರು ಬಿ.ಎಲ್.ಒ ಕಚೇರಿಗೆ ಹಾಜರಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿದರು. ಬಿಎಲ್.ಒ ಪರಿಮಳ ಅವರ ಸಮಕ್ಷಮದಲ್ಲಿ ನಗರಸಭೆ ಪೌರಾಯುಕ್ತೆ ಅಮೃತಾ ಅವರ ನೇತೃತ್ವದಲ್ಲಿ ದಾಖಲೆಗಳನ್ನು ಸ್ವೀಕರಿಸಿ ಪರಿಶೀಲಿಸಲಾಯಿತು.
ಮತದಾರರು ಹಾಜರುಪಡಿಸಿದ ದಾಖಲೆಗಳಲ್ಲಿನ ಹೆಸರು, ವಿಳಾಸ ಹಾಗೂ ಹಿಂದಿನ ಮತದಾರರ ಪಟ್ಟಿಯಲ್ಲಿನ ವಿವರಗಳ ಹೊಂದಾಣಿಕೆ ಸೇರಿದಂತೆ ಅಗತ್ಯ ಅಂಶಗಳನ್ನು ಪರಿಶೀಲಿಸಲಾಯಿತು. ದಾಖಲೆಗಳು ಪೂರ್ಣವಾಗಿರದವರಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಯಿತು.
ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರ ಹೆಸರು ಅಂತಿಮ ಪಟ್ಟಿಯಿಂದ ಕೈಬಿಡದಂತೆ, ನೋಟಿಸ್ ಪಡೆದವರು ನಿಗದಿತ ಅವಧಿಯಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದರು.
ಪರಿಶೀಲನಾ ಕಾರ್ಯದ ವೇಳೆ ನಗರಸಭೆ ಮಾಜಿ ಸದಸ್ಯ ಎಲ್. ಅನಿಲ್ ಕುಮಾರ್, ಶಂಕರ್, ಕೆ.ಎನ್. ಲಕ್ಷ್ಮೀನರಸಿಂಹಯ್ಯ, ಸತ್ಯಮೂರ್ತಿ, ಟಿ. ರಾಜಣ್ಣ, ನಾಗರಾಜ್, ನವೀನ್, ಚೆನ್ನಮ್ಮ, ಜಾವೀದ್ ಪಾಷಾ ಹಾಗೂ ಅನಂತರಾಮಯ್ಯ ಇದ್ದರು.