
Sidlaghatta, Chikkaballapur : ಶಿಡ್ಲಘಟ್ಟ ತಾಲ್ಲೂಕಿನ ತಲದುಮ್ಮನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ನಲ್ಲಿಗಳ ಮೂಲಕ ಮಣ್ಣು ಮಿಶ್ರಿತ ಹಳದಿ ಬಣ್ಣದ ನೀರು ಪೂರೈಕೆಯಾಗುತ್ತಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ ಇಪ್ಪತ್ತು ದಿನಗಳಿಂದ ಈ ಅಶುದ್ಧ ನೀರು ಪೂರೈಕೆ ಸಮಸ್ಯೆ ಮುಂದುವರಿದಿದ್ದು, ರೇಷ್ಮೆ ಕೃಷಿ ಹಾಗೂ ಹೈನುಗಾರಿಕೆ ಆಧಾರಿತ ಕುಟುಂಬಗಳು ತೀವ್ರ ಸಂಕಷ್ಟ ಅನುಭವಿಸುತ್ತಿವೆ.
ಗ್ರಾಮದ ನಲ್ಲಿಗಳಲ್ಲಿ ಹರಿಯುತ್ತಿರುವ ನೀರಿನಲ್ಲಿ ಮಣ್ಣು, ಹುಳು, ಉಪ್ಪಟೆಗಳು ಕಾಣಿಸುತ್ತಿದ್ದು, ಈ ನೀರನ್ನು ಕುಡಿಯಲು, ಅಡುಗೆಗೆ ಅಥವಾ ಹಸು-ಕುರಿಗಳಿಗೆ ನೀಡಲು ಸಹ ಗ್ರಾಮಸ್ಥರು ಹೆದರುತ್ತಿದ್ದಾರೆ. ಅನಿವಾರ್ಯವಾಗಿ ದಿನನಿತ್ಯದ ಬಳಕೆಗಾಗಿ ಜನರು ₹700 ರೂಪಾಯಿ ನೀಡಿ ಖಾಸಗಿ ಟ್ಯಾಂಕರ್ ನೀರು ಖರೀದಿಸುವಂತಾಗಿದೆ.
ಗ್ರಾಮದ ಹೊರವಲಯದಲ್ಲಿರುವ ಕೊಳವೆಬಾವಿಯ ಪಕ್ಕದಲ್ಲೇ ನೀರಿನ ಕಾಲುವೆ ಮತ್ತು ಹಳ್ಳವಿರುವುದರಿಂದ, ಮಳೆಗಾಲದಲ್ಲಿ ಕಾಲುವೆ ಮತ್ತು ಹಳ್ಳದ ನೀರು ಕೊಳವೆಬಾವಿಗೆ ಸೇರಿ ಮಣ್ಣು ಮತ್ತು ಜೀವಾಣು ಮಿಶ್ರಿತ ನೀರು ನಲ್ಲಿಗಳ ಮೂಲಕ ಪೂರೈಕೆಯಾಗುತ್ತಿದೆ.
ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ಯಾರೂ ಅದನ್ನು ಉಪಯೋಗಿಸುತ್ತಿಲ್ಲ. ಆದರೆ ಹಾಲು ನೀಡುವ ಎಮ್ಮೆ, ಕುರಿ, ಆಕಳುಗಳಿಗೂ ಈ ಅಶುದ್ಧ ನೀರನ್ನೇ ಬಳಸಲಾಗುತ್ತಿದೆ, ಇದು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿಯಾಗಿದೆ.
ಗ್ರಾಮಸ್ಥರು ಈ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ಅನೇಕ ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ. “ನೀರಿನ ಗುಣಮಟ್ಟ ಪರೀಕ್ಷೆ ಮಾಡಿಸಿ ಶುದ್ಧ ನೀರು ಪೂರೈಕೆಯಾಗುವಂತೆ ಕ್ರಮ ಕೈಗೊಳ್ಳಬೇಕು,” ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.