Home News ಯುಗಾದಿ ಹಬ್ಬದ ದಿನ ಸೂರ್ಯನ ಸುತ್ತ ಆಕರ್ಷಕ ಉಂಗುರ

ಯುಗಾದಿ ಹಬ್ಬದ ದಿನ ಸೂರ್ಯನ ಸುತ್ತ ಆಕರ್ಷಕ ಉಂಗುರ

0
ugadi sunlight ring rain sidlaghatta

ತಾಲ್ಲೂಕಿನಲ್ಲಿ ಬುಧವಾರ ಮಧ್ಯಾಹ್ನ 12 ಗಂಟೆಯಿಂದ ಸರಿಸುಮಾರು ಅರ್ಧತಾಸು ಸೂರ್ಯ ವಿಸ್ಮಯಕಾರಿಯಾಗಿ ಕಂಗೊಳಿಸಿದ್ದಾನೆ.
ಸೂರ್ಯನ ಸುತ್ತಲೂ ವತ್ತಾಕಾರದಲ್ಲಿ ಕಪ್ಪು ಮೋಡ ಮತ್ತು ಅದರ ಸುತ್ತಲೂ ಆಕರ್ಷಕ ಹಳದಿ ಬಣ್ಣ ನಂತರ ಕಾಮನಬಿಲ್ಲಿನ ಬಣ್ಣಗಳು ಗೋಚರಿಸಿದ್ದು ಬಾನಂಗಳದ ಈ ಕೌತುಕ ಸರ್ವರ ಆಕರ್ಷಣೆಯ ಕೇಂದ್ರ ಬಿಂದುವಾಯಿತು.

ಸೂರ್ಯನ ಸುತ್ತಲೂ ಆವರಿಸಿರುವ ಮೋಡದಲ್ಲಿ ಹುದುಗಿರುವ ಮಂಜುಗಡ್ಡೆ ಕಣಗಳ ಮೇಲೆ ಬೆಳಕು ಹರಿದ ಪರಿಣಾಮ ಆಕರ್ಷಕ ವೃತ್ತ ಗೋಚರಿಸಿದೆ. ಕಾಮನಬಿಲ್ಲು ಸೃಷ್ಟಿಯಾದಂತೆ ನಡೆದ ವಿದ್ಯಮಾನ ಇದಾಗಿದ್ದು ಬಣ್ಣಗಳಲ್ಲಿ ಮಾತ್ರ ವ್ಯತ್ಯಾಸ ಕಂಡುಬಂದಿದೆ. ವಾತಾವರಣದಲ್ಲಿ ತೇವಾಂಶ ಹೆಚ್ಚು ಇರುವ ಮತ್ತು ಮಳೆ ಬರುವ ಮುನ್ಸೂಚನೆಯನ್ನು ಇದು ನೀಡುತ್ತದೆ.

ವೈಜ್ಞಾನಿಕ ವಿವರಣೆ :

ಮೋಡಗಳಲ್ಲಿರುವ ಮಂಜುಗಡ್ಡೆ ಹರಳುಗಳು ಸೂರ್ಯನಿಗೆ ೨೨ ಡಿಗ್ರಿ ಅಥವಾ ಹೆಚ್ಚಿನ ಕೋನದಲ್ಲಿ ವಕ್ರೀಭವನಕ್ಕೀಡಾಗುತ್ತವೆ ಮತ್ತು ಸೂರ್ಯನ ಸುತ್ತ ವೃತ್ತಾಕಾರವಾಗಿ ಹರಡಿಕೊಳ್ಳುತ್ತವೆ. ಈ ಹರಳುಗಳ ಮೂಲಕ ಸೂರ್ಯನ ಬೆಳಕು ಹಾದುಹೋಗುವಾಗ, ಬಿಳಿಯ ಕಿರಣವು ಕಾಮನಬಿಲ್ಲಿನ ಏಳು ಬಣ್ಣಗಳಾಗಿ ಚದುರಿ, ಆಕರ್ಷಕ ಕಾಮನಬಿಲ್ಲು ಗೋಚರಿಸುತ್ತದೆ. ಇದು ತೀರಾ ಅಪರೂಪವೇನಲ್ಲ ಎನ್ನುತ್ತಾರೆ ವಿಜ್ಞಾನಿಗಳು. ವಿಭಿನ್ನ ಸ್ಥಳಗಳಲ್ಲಿ ವಿಭಿನ್ನ ಸಮಯದಲ್ಲಿ ಗೋಚರಿಸುತ್ತದೆ.

ಇದು ಸೂರ್ಯನ ಬೆಳಕು, ಮೋಡದಲ್ಲಿರುವ ಮಂಜುಗಡ್ಡೆಯ ಹರಳುಗಳೊಂದಿಗಿನ ಸಂವಹನದ ವೇಳೆ ಸಂಭವಿಸುವ ಬೆಳಕಿನ ಪ್ರತಿಫಲನಾತ್ಮಕ ಪ್ರಕ್ರಿಯೆ. ವೈಜ್ಞಾನಿಕ ಭಾಷೆಯಲ್ಲಿ ಇದನ್ನು ಸೂರ್ಯನ 22 ಡಿಗ್ರಿ ಹ್ಯಾಲೋ ಎಂದು ಕರೆಯಲಾಗುತ್ತದೆ. ಕಾರಣವೆಂದರೆ, ಕೇಂದ್ರದಲ್ಲಿ 22 ಡಿಗ್ರಿ ಕೋನದಲ್ಲಿ ಕಾಣಿಸಿಕೊಳ್ಳುವ ಉಂಗುರ ಆಕಾರವಿದು. ಮಳೆಯ ವಾತಾವರಣವಿದ್ದಾಗ, ಭೂಮಿಯ ಮೇಲ್ಮೈಯಿಂದ 5 ರಿಂದ 8 ಕಿ.ಮೀ. ಎತ್ತರದಲ್ಲಿರುವ ಹವಾಗೋಲದಲ್ಲಿ ಸಿರಸ್ ಅಥವಾ ಸಿರೋಸ್ಟ್ರೇಟಸ್ ಮೋಡಗಳು ರೂಪುಗೊಂಡಾಗ ಈ ದೃಶ್ಯ ವೈವಿಧ್ಯವು ಮನ ಸೆಳೆಯುತ್ತದೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version