
Sidlaghatta : ಮಣ್ಣಿನ ಋಣ ತೀರಿಸಿದ ಕೃಷಿಕ ಎಂದೇ ಗುರುತಿಸಿಕೊಂಡಿದ್ದ ಮೇಲೂರು ಭೀಮಣ್ಣ (ಬಿ. ಮುನಿಶಾಮಯ್ಯ) ಅವರು ಸೇತುವೆ ಕಟ್ಟಿಸಿ, ಬಿತ್ತನೆ ಗಡ್ಡೆ ಪೂರೈಸಿ ರೈತರ ಆಪ್ತಮಿತ್ರರಾದ ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಕೃಷಿಕ. ನಲವತ್ತರ ದಶಕದಿಂದಲೂ ಆಲೂಗಡ್ಡೆ, ಈರುಳ್ಳಿ ಮತ್ತು ರೇಷ್ಮೆ ವ್ಯಾಪಾರ ನಡೆಸಿದ್ದ ಅವರು, ಗ್ರಾಮ ಮತ್ತು ತಾಲ್ಲೂಕಿನ ಆರ್ಥಿಕತೆಗೆ ಪೂರಕವಾದ ಹಲವು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು.
In English: Melur Bheemanna (B. Munishamayya) of Meluru village in Sidlaghatta taluk was a farmer-philanthropist who, from the 1940s, built a stone bridge at his own expense linking Meluru and Bhaktarahalli, and later organised quality potato seed-tuber supply to farmers across Chikkaballapura and Kolar districts on a “pay after harvest” basis. His grandson B.N. Ravikumar is the present-day MLA of the constituency.
ನಲವತ್ತರ ದಶಕದ ಕೃಷಿಕ, ಗ್ರಾಮದ ಆರ್ಥಿಕತೆಯ ಬೆನ್ನೆಲುಬು
1940ರ ದಶಕದಲ್ಲೇ ಆಲೂಗಡ್ಡೆ, ಈರುಳ್ಳಿ ಮತ್ತು ರೇಷ್ಮೆ ವ್ಯಾಪಾರ ನಡೆಸಿದ್ದ ಭೀಮಣ್ಣನವರು, ವ್ಯಾಪಾರಕ್ಕಷ್ಟೇ ಸೀಮಿತವಾಗದೆ ಗ್ರಾಮ ಮತ್ತು ತಾಲ್ಲೂಕಿನ ಆರ್ಥಿಕತೆಗೆ ಪೂರಕವಾದ ಹಲವು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು.
ಮೇಲೂರು ಮತ್ತು ಭಕ್ತರಹಳ್ಳಿ ಗ್ರಾಮಗಳ ನಡುವೆ ಒಂದು ಹೊಳೆ ಹರಿಯುತ್ತಿದ್ದು, ಮಳೆಗಾಲದಲ್ಲಿ ಎರಡೂ ಕಡೆಯ ಜನರಿಗೆ ಓಡಾಟ ಕಷ್ಟಸಾಧ್ಯವಾಗಿತ್ತು. ಇದನ್ನು ಮನಗಂಡ ಭೀಮಣ್ಣನವರು ಸ್ವಂತ ಹಣದಿಂದ ಅಲ್ಲಿ ಸಣ್ಣ ಪ್ರಮಾಣದ ಕಲ್ಲಿನ ಸೇತುವೆಯೊಂದನ್ನು ಕಟ್ಟಿಸಿದರು. ಗಾತ್ರದಲ್ಲಿ ಚಿಕ್ಕದಾದರೂ, ಈ ಸೇತುವೆ ಸ್ಥಳೀಯರ ಪಾಲಿಗೆ ಜೀವನಾಡಿಯಾಯಿತು. ಇದರಿಂದಾಗಿ ಭೀಮಣ್ಣನವರ ತೋಟಕ್ಕೆ ಬರುತ್ತಿದ್ದ ಕೂಲಿಕಾರರಿಗೆ ಹಾಗೂ ಭಕ್ತರಹಳ್ಳಿ ಗ್ರಾಮಸ್ಥರು ಸಂತೆಗೆ ಹೋಗಿ ಬರಲು ಅನುಕೂಲವಾಯಿತು. ಆರು ದಶಕಗಳ ನಂತರವೂ ಈ ಸೇತುವೆ ಸುಸ್ಥಿತಿಯಲ್ಲಿದೆ.
ಪಂಚಾಯಿತಿ ಚೇರ್ಮನ್ ಆಗಿದ್ದ ಸಂದರ್ಭದಲ್ಲಿ, ಸರ್ಕಾರಿ ಆಸ್ಪತ್ರೆಯ ಉದ್ಘಾಟನೆಗೆ ಮೈಸೂರು ಮಹಾರಾಜರನ್ನು ಕರೆಸಿದ್ದ ಸಂಗತಿಯನ್ನು ಗ್ರಾಮದ ಹಿರಿಯರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಸಂತೆ ನಾರಾಯಣಸ್ವಾಮಿಯವರ ಪ್ರಕಾರ, ಆಗ ಕಾಚಹಳ್ಳಿಯಿಂದ ಮೇಲೂರಿನವರೆಗೂ ದಾರಿಗೆ ಚಪ್ಪರ ಹಾಕಿಸಿ ಸ್ವಾಗತ ಕೋರಲಾಗಿತ್ತು.
ಕರ್ನಲ್ ಕುಪ್ಪೇಜ್ ಎಂಬ ಮೊದಲ ಹೆಜ್ಜೆ
ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಕೃಷಿ ಚರಿತ್ರೆಯಲ್ಲಿ ಆಲೂಗಡ್ಡೆಗೆ ವಿಶೇಷ ಸ್ಥಾನವಿದೆ. ಸುಮಾರು 1800ರ ಆಸುಪಾಸಿನಲ್ಲಿ ಬ್ರಿಟಿಷ್ ಅಧಿಕಾರಿ ಕರ್ನಲ್ ಕುಪ್ಪೇಜ್ (Colonel Cuppage) ಅವರು ನಂದಿ ಬೆಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಕ್ಕೆ ಆಲೂಗಡ್ಡೆ ಬೆಳೆಯನ್ನು ಮೊದಲ ಬಾರಿಗೆ ಪರಿಚಯಿಸಿದರು. ಬರಗಾಲ ಮತ್ತು ಆಹಾರದ ಅಭಾವಕ್ಕೆ ಪರ್ಯಾಯವಾಗಿ ತಂದ ಈ ಬೆಳೆ, ಮುಂದೆ ಪ್ರಾಂತ್ಯದ ರೈತರ ಬದುಕಿನ ಮೇಲೆ ಪರಿಣಾಮ ಬೀರಿತು. ಬೆಂಗಳೂರಿನ ಸರ್ಕಾರಿ ತೋಟ (ನಂತರದಲ್ಲಿ ಅದು ಲಾಲ್ ಭಾಗ್ ಆಯಿತು)ದಲ್ಲಿ ಆಲೂಗಡ್ಡೆ ಬೆಳೆಯ ಪ್ರಸಾರವನ್ನು ಡಾ. ಬೆಂಜಮಿನ್ ಹೇನ್ (Dr. Benjamin Heyne) ಅವರು ಮುಂದುವರಿಸಿದ್ದು, 1802-05ರ ಈಸ್ಟ್ ಇಂಡಿಯಾ ಕಂಪನಿಯ ದಾಖಲೆಗಳಲ್ಲೂ ಇದರ ಉಲ್ಲೇಖವಿದೆ. ಈ ಇತಿಹಾಸ ಪುಸ್ತಕದ ಪುಟಗಳಿಗಷ್ಟೇ ಸೀಮಿತವಾಗಲಿಲ್ಲ. ಒಂದೂವರೆ ಶತಮಾನದ ನಂತರ, ಅದೇ ಬೆಳೆಯನ್ನು ಸ್ಥಳೀಯ ನೆಲದಲ್ಲಿ ಮುಂದುವರಿಸಿದವರು ಮೇಲೂರಿನ ಭೀಮಣ್ಣ.
“ಬೆಳೆ ಬಂದ ಮೇಲೆ ಹಣ ಕೊಡಿ” ಎಂಬ ನೀತಿ
1960ರ ದಶಕದಲ್ಲಿ ಆಲೂಗಡ್ಡೆ ಬೆಳೆಗಾರರು ಎದುರಿಸುತ್ತಿದ್ದ ದೊಡ್ಡ ಸಮಸ್ಯೆ ಗುಣಮಟ್ಟದ ಬಿತ್ತನೆ ಗಡ್ಡೆಗಳ ಕೊರತೆ. ಇದನ್ನು ನೀಗಿಸಲು ಭೀಮಣ್ಣನವರು ಬಿತ್ತನೆ ಹಂಗಾಮು ಶುರುವಾಗುವುದಕ್ಕೂ ಮುಂಚಿತವಾಗಿಯೇ ಗುಣಮಟ್ಟದ ಆಲೂಗೆಡ್ಡೆ ಪೂರೈಕೆಯಾಗುವಂತೆ ವ್ಯವಸ್ಥೆ ಮಾಡಿದರು. ಹೊರರಾಜ್ಯದಿಂದ ತರಿಸಿದ “ಕುಫ್ರಿ” (Kufri) ಸರಣಿಯ ಆರಂಭಿಕ ತಳಿಗಳನ್ನು ತಾಲ್ಲೂಕು ಮತ್ತು ಹಳ್ಳಿ ಮಟ್ಟದವರೆಗೂ ತಲುಪಿಸುವ ಜಾಲವನ್ನು ಅವರು ರೂಪಿಸಿದರು. ಬಿತ್ತನೆ ಗಡ್ಡೆಯ ವೆಚ್ಚ ಭರಿಸಲಾಗದ ಬಡ ರೈತರಿಗೆ “ಬೆಳೆ ಬಂದ ನಂತರ ಹಣ ಪಾವತಿಸಿ” ಎಂಬ ನೀತಿಯನ್ನು ಜಾರಿಗೆ ತಂದದ್ದು ಇನ್ನೊಂದು ವಿಶೇಷತೆ. ಈ ನಿರ್ಧಾರ ಈ ಭಾಗದಲ್ಲಿ ಆಲೂಗಡ್ಡೆ ಕೃಷಿಯ ವಿಸ್ತೀರ್ಣ ಹೆಚ್ಚಲು ಕೊಡುಗೆ ನೀಡಿತು.
ಬಿತ್ತನೆ ಗಡ್ಡೆ ವಿತರಣೆಗಷ್ಟೇ ಅವರ ಕೆಲಸ ನಿಲ್ಲಲಿಲ್ಲ. ಉತ್ತರ ಭಾರತದ ವಿಜ್ಞಾನಿಗಳು ಮತ್ತು ತಜ್ಞರ ಜೊತೆ ಸಂಪರ್ಕ ಸಾಧಿಸಿ, ಚಿಕ್ಕಬಳ್ಳಾಪುರದ ಒಣ ಹವಾಮಾನಕ್ಕೆ ಸೂಕ್ತವಾದ ತಳಿ ಯಾವುದು, ರೋಗ ತಡೆಗಟ್ಟುವುದು ಹೇಗೆ ಎಂಬ ಮಾಹಿತಿಯನ್ನು ಸ್ಥಳೀಯ ರೈತರಿಗೆ ತಲುಪಿಸುವ ಕೆಲಸವನ್ನೂ ಅವರು ಮಾಡಿದರು.
ಶಿಡ್ಲಘಟ್ಟದಿಂದ ಇಡೀ ಚಿಕ್ಕಬಳ್ಳಾಪುರದವರೆಗೆ
ಭೀಮಣ್ಣನವರ ಈ ಕೃಷಿ ಕಾಳಜಿಯ ಫಲ ಒಂದೇ ಗ್ರಾಮಕ್ಕೆ ಸೀಮಿತವಾಗಲಿಲ್ಲ. ಶಿಡ್ಲಘಟ್ಟ, ವಿಜಯಪುರ ಸೇರಿದಂತೆ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ರೈತರ ಆರ್ಥಿಕ ಸುಧಾರಣೆಗೆ ಇವರ ಶ್ರಮ ಕಾರಣವಾಯಿತು. ಶತಮಾನಗಳ ಹಿಂದೆ ಕರ್ನಲ್ ಕುಪ್ಪೇಜ್ ಅವರಿಂದ ಆರಂಭವಾದ ಆಲೂಗಡ್ಡೆ ಕೃಷಿ, ಇಂದಿಗೂ ಈ ಭಾಗದಲ್ಲಿ ಜೀವಂತವಾಗಿ ಉಳಿದಿರುವುದಕ್ಕೆ ಭೀಮಣ್ಣನಂತಹ ಸ್ಥಳೀಯರ ಶ್ರಮವೂ ಕಾರಣ ಎಂಬುದನ್ನು ಮರೆಯುವಂತಿಲ್ಲ.
ಮೂರು ತಲೆಮಾರುಗಳ ಸಾರ್ವಜನಿಕ ಸೇವೆ
ಪಂಚಾಯಿತಿ ಚೇರ್ಮನ್ ಆಗಿ ರೈತರ ಕಷ್ಟ ಮತ್ತು ಜನಸಾಮಾನ್ಯರ ಆರೋಗ್ಯ ಸುಧಾರಣೆಗಾಗಿ ಕೆಲಸ ಮಾಡಿದ್ದ ಭೀಮಣ್ಣನವರ ಮೊಮ್ಮಗ ಶಾಸಕ ಬಿ.ಎನ್.ರವಿಕುಮಾರ್ ಅವರು ಇದೀಗ ಕ್ಷೇತ್ರದ ಶಾಸಕರಾಗಿದ್ದಾರೆ. ರಾಜಕೀಯದಲ್ಲಿ ಸಕ್ರಿಯರಾಗಿರುವ ಅವರು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.