ತಾಲ್ಲೂಕಿನ ಹಿತ್ತಲಹಳ್ಳಿ ಗ್ರಾಮಸ್ಥರು ನಗರಸಭೆಯಿಂದ ಕಸ ಹಾಕುತ್ತಿರುವ ಜಾಗವನ್ನು ಸ್ಥಳಾಂತರಿಸುವಂತೆ ಕೋರಿ ನಗರಸಭೆ ಆಯುಕ್ತ ಚಲಪತಿ ಅವರಿಗೆ ಗುರುವಾರ ಮನವಿಯನ್ನು ಸಲ್ಲಿಸಿದರು.
ನಗರದ ತ್ಯಾಜ್ಯವನ್ನೆಲ್ಲಾ ತಂದು ಹಿತ್ತಲಹಳ್ಳಿಯಲ್ಲಿ “ಕಸ ವಿಲೇವಾರಿ ಘಟಕ”ದಲ್ಲಿ ಸುರಿಯಲಾಗುತ್ತಿದೆ. ಅಲ್ಲಿ ತ್ಯಾಜ್ಯದ ವಿಲೇವಾರಿಯಾಗಲೀ, ಸಂಸ್ಕರಣೆಯಾಗಲೀ ನಡೆಯುತ್ತಿಲ್ಲ. ಅದರ ದುರ್ವಾಸನೆಯಿಂದ ಸುತ್ತಮುತ್ತಲಿನ ರೇಷ್ಮೆ ಬೆಳೆಗಾರರಿಗೆ ಬೆಳೆಯಾಗದೇ ನಷ್ಟವಾಗುತ್ತಿದೆ. ಈ ಸ್ಥಳವನ್ನು ವಿಶ್ರಾಂತಿ ತೋಟ ಮಾಡುತ್ತೇವೆಂದು ನಗರಸಭೆಯವರು ಮಂಜೂರಾತಿಯನ್ನು ಪಡೆದಿರುತ್ತಾರೆ. ಆದರೆ ಕಸವನ್ನು ತಂದು ಸುರಿಯಲಾಗುತ್ತಿದೆ. ಈ ತ್ಯಾಜ್ಯದಿಂದಾಗಿ ಸುಮಾರು ನೂರೈವತ್ತು ನಾಯಿಗಳಿಲ್ಲಿ ಬೀಡುಬಿಟ್ಟಿವೆ. ಅವುಗಳಿಂದ ರಸ್ತೆಯಲ್ಲಿ ಹೋಗುವ ಸಾರ್ವಜನಿಕರಿಗೂ ಉಪಟಳವಾಗುತ್ತಿದೆ. ಕೂಡಲೆ ಈ ಜಾಗದಲ್ಲಿ ಕಸ ಹಾಕುವುದನ್ನು ನಿಲ್ಲಿಸಿ ಬೇರೆಡೆಗೆ ವರ್ಗಾಯಿಸಬೇಕೆಂದು ಮನವಿ ಮಾಡಿದರು.
ನಗರಸಭೆ ಆಯುಕ್ತ ಚಲಪತಿ ಮಾತನಾಡಿ, ಇನ್ನು ಹದಿನೈದು ದಿನಗಳಲ್ಲಿ ಯಂತ್ರಗಳ ಮೂಲಕ ತ್ಯಾಜ್ಯವನ್ನು ಸಂಸ್ಕರಣೆ ಮಾಡಿಸಲಾಗುವುದು. ಬೇರೆಡೆ ಜಮೀನನ್ನು ಕೋರಿದ್ದೇವೆ. ಇನ್ನು ಎರಡು ತಿಂಗಳೊಳಗೆ ನಮಗೆ ತ್ಯಾಜ್ಯ ವಿಲೇವಾರಿ ಮಾಡಲು ದೂರದಲ್ಲಿ ಯಾರಿಗೂ ತೊಂದರೆ ಆಗದಂತೆ ಜಮೀನು ಸಿಗಲಿದೆ ಎಂದು ಹೇಳಿದರು.
ಹಿತ್ತಲಹಳ್ಳಿ ಎಚ್.ಜಿ.ಗೋಪಾಲಗೌಡ, ಸುರೇಶ್, ಜಿ.ಗೋಪಾಲಗೌಡ, ಜಿ.ನಂಜುಂಡಪ್ಪ, ಕೃಷ್ಣಪ್ಪ, ಎಚ್.ಆರ್.ವೆಂಕಟೇಶ್ ಹಾಜರಿದ್ದರು.
- Advertisement -
- Advertisement -
- Advertisement -