ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಬುಧವಾರ ನಡೆದ ಸಮಗ್ರ ಕೃಷಿ ಅಭಿಯಾನ, ವಸ್ತು ಪ್ರದರ್ಶನ ಹಾಗೂ ರೈತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಶೇಕಡಾ ಐವತ್ತರಷ್ಟು ರೈತರಿಗೆ ಸಹಾಯಧನದ ಬಗ್ಗೆಯಾಗಲೀ, ಸರ್ಕಾರಿ ಯೋಜನೆಗಳ ಬಗ್ಗೆ ತಿಳಿವಳಿಕೆ ಇಲ್ಲ. ಕೆಲವೇ ಮಂದಿ ಬುದ್ಧಿವಂತ ರೈತರು ಸರ್ಕಾರದ ಯೋಜನೆಗಳ ಸದ್ಭಳಕೆ ಮಾಡಿಕೊಳ್ಳಲು ಸಾಧ್ಯವಾಗಿದೆ. ರೈತರಿಗೆ ಅರಿವು ಮೂಡಿಸುವ ಜವಾಬ್ದಾರಿಯಿದೆ. ನಗರದಲ್ಲಿ ಕಚೇರಿಯ ಬಳಿ ನಡೆಸುವ ಬದಲು ರೈತರ ತೋಟಗಳಲ್ಲಿ ಈ ರೀತಿಯ ಅಭಿಯಾನಗಳನ್ನು ನಡೆಸಿದ್ದರೆ ಚೆನ್ನಾಗಿತ್ತು ಎಂದು ಅಭಿಪ್ರಾಯಪಟ್ಟರು.
ಒಣಬೇಸಾಯದ ಕ್ಷೇತ್ರೋತ್ಸವವನ್ನು ಮಾಡುವ ಮೂಲಕ ಇಲಾಖೆಗಳು ರೈತರನ್ನು ಉತ್ತೇಜಿಸುವ, ಪ್ರೋತ್ಸಾಹಿಸುವ ಮತ್ತು ಜ್ಞಾನ ನೀಡುವ ಕೆಲಸವನ್ನು ಮಾಡಬೇಕು ಎಂದು ಅವರು ತಿಳಿಸಿದರು.
ಜಿಕೆವಿಕೆ ಬೇಸಾಯ ಶಾಸ್ತ್ರಜ್ಞ ಡಾ.ಆನಂದ್ ಮಾತನಾಡಿ, ಪೌಷ್ಠಿಕಯುಕ್ತ ಸತ್ವಭರಿತ ಆಹಾರದ ಉತ್ಪಾದನೆಗೆ ಆದ್ಯತೆ ನೀಡಬೇಕಾದ ಅಗತ್ಯವಿದೆ. ಆಹಾರ ಉತ್ಪಾದನೆಗಿಂತ ಆರೋಗ್ಯ ಕಾಪಾಡಲು ನಾವು ಹೆಚ್ಚು ಖರ್ಚು ಮಾಡುತ್ತಿರುವುದು ದುರಂತದ ಸಂಗತಿಯಾಗಿದೆ. ದೇಶೀಯ ರೋಗನಿಯಂತ್ರಣ ಪದ್ಧತಿಗಳನ್ನು ಬಿಟ್ಟು ನಾವೀಗ ಕೀಟನಾಶಕ, ಕಳೆನಾಶಕ, ರೋಗನಾಶಕ ರಾಸಾಯನಿಕಗಳನ್ನು ವಿದೇಶಗಳಿಂದ ತರಿಸಿ ಬಳಸುತ್ತೇವೆ. ಈ ಕಾರಣದಿಂದ ನಮ್ಮ ಆಹಾರ ಬೆಳೆಗಳನ್ನು ವಿದೇಶಿ ಮಾರುಕಟ್ಟೆ ತಿರಸ್ಕರಿಸುತ್ತಿದೆ. ನೀರಿನ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಬೇಕು. ಹನಿಹನಿ ನೀರನ್ನು ಇಂಗಿಸಬೇಕು. ಜೀವಂತಿಕೆಯನ್ನು ತುಂಬುವ ಜಮೀನನ್ನು ತಯಾರು ಮಾಡಬೇಕು. ರೈತರು ತಮ್ಮ ಜಮೀನಿನ ಒಂದೆಡೆ ಮನೆಗೆ ಆಗುವಷಟಾದರೂ ಸಿರಿಧಾನ್ಯಗಳನ್ನು ಬೆಳೆದುಕೊಳ್ಳಬೇಕು ಎಂದು ಹೇಳಿದರು.
ಕೃಷಿ ಪಂಡಿತ ಪುರಸ್ಕೃತ ಎಚ್.ಜಿ.ಗೋಪಾಲಗೌಡ ಮಾತನಾಡಿ, ಈ ಬಾರಿ ಮಗೆ ಮಳೆಯೂ ಕೈಕೊಟ್ಟಿದೆ. ರಾಗಿ ಬೆಲೆ ಗಗನಕ್ಕೇರಿದೆ. ರೈತ ಸಾಕಷ್ಟು ಕುಗ್ಗಿ ಹೋಗಿದ್ದಾನೆ. ಸರ್ಕಾರದ ಮಟ್ಟದಲ್ಲಿ ಶಾಸಕರು ನಮ್ಮ ಪರಿಸ್ಥಿತಿಯನ್ನು ವಿವರಿಸಿ ಬರ ಪ್ರದೇಶವೆಂದು ಘೋಷಿಸಿ, ಒಂದು ಎಕರೆಗೆ ಇಪ್ಪತ್ತು ಸಾವಿರ ರೂಗಳನ್ನು ಕೊಡಿಸಿ ರೈತರನ್ನು ಉಳಿಸಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಸಿಡಿಪಿಒ ಅಧಿಕಾರಿ ಲಕ್ಷ್ಮೀದೇವಮ್ಮ ತಮ್ಮ ಇಲಾಖೆಯ ಅಡಿಯಲ್ಲಿ ಬರುವ ಸ್ತ್ರೀಶಕ್ತಿ, ಅಂಗನವಾಡಿ, ಆಶಾಕಾರ್ಯಕರ್ತೆಯರೆಲ್ಲಾ ಸೇರಿ ಸಂಗ್ರಹಿಸಿದ ದೇಣಿಗೆ ಒಂದೂಕಾಲು ಲಕ್ಷ ರೂಗಳ ಚೆಕ್ ಅನ್ನು ಕೊಡಗಿನ ಸಂತ್ರಸ್ತರಿಗೆ ತಲುಪಿಸಲು ಶಾಸಕರಿಗೆ ನೀಡಿದರು.
ರೈತರಿಗೆ ಮಾಹಿತಿ ನೀಡಲು ವಿವಿಧ ಇಲಾಖೆಗಳ ಮಳಿಗೆಗಳು, ಯಂತ್ರೋಪಕಕರಣಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ತಹಶೀಲ್ದಾರ್ ಅಜಿತ್‌ಕುಮಾರ್ ರೈ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಉಪಾಧ್ಯಕ್ಷ ಮುನಿಯಪ್ಪ, ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ಕೃಷಿ ಉಪನಿರ್ದೇಶಕಿ ಪಂಕಜಾ, ತೋಟಗಾರಿಕಾ ಸಹಾಯಕ ನಿರ್ದೇಶಕ ಮುನೇಗೌಡ, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಬೋಜಣ್ಣ, ಕೃಷಿ ಇಲಾಖೆಯ ಮುರಳಿ, ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಮುನಿಯಪ್ಪ, ಜಿಕೆವಿಕೆಯ ಹುಲ್ಲುನಾಚೇಗೌಡ, ಡಾ.ರಂಗಯ್ಯ, ಡಾ.ಸೋಮಶೇಖರ್, ವಿಶ್ವನಾಥ್, ಡಾ.ಪುಷ್ಪ, ರೈತಸಂಘದ ಪದಾಧಿಕಾರಿಗಳು ಹಾಜರಿದ್ದರು.
- Advertisement -
- Advertisement -
- Advertisement -
- Advertisement -