ಗರ್ಭಿಣಿಯರ ಆರೋಗ್ಯ ಮತ್ತು ಮಕ್ಕಳ ಪೋಷಣೆಯ ಬಗ್ಗೆ ಪಟ್ಟಣದ ಕದಿರಿಪಾಳ್ಯ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಆರೋಗ್ಯ ಇಲಾಖೆ ಸಹಭಾಗಿತ್ವದಲ್ಲಿ ಮಾಹಿತಿ ಶಿಬಿರವನ್ನು ಆಯೋಜಿಸಲಾಗಿತ್ತು.
ಎದೆ ಹಾಲಿನ ಮಹತ್ವ, ಮಕ್ಕಳಲ್ಲಿ ಕಂಡು ಬರುವ ಆರೋಗ್ಯ ಸಮಸ್ಯೆಗಳು, ರೋಗನಿರೋಧಕ ಚುಚ್ಚುಮದ್ದುಗಳ ಬಗ್ಗೆ, ಪೂರಕ ಪೌಷ್ಠಿಕ ಆಹಾರಗಳು ಹಾಗೂ ಇಲಾಖೆಯ ಸೇವಾ ಸೌಲಭ್ಯಗಳ ಮಾಹಿತಿಯನ್ನು ತಾಯಂದಿರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಯಿತು.
ಶಿಬಿರದ ಉದ್ಘಾಟನೆಯನ್ನು ಮೊಳಕೆ ಬರಿಸಿದ ಕಾಳುಗಳು, ಹಣ್ಣುಗಳು, ತರಕಾರಿ, ಸೊಪ್ಪು, ಹಾಲು, ಮೊಟ್ಟೆ, ಬೇಳೆಗಳನ್ನಿರಿಸಿ ದೀಪ ಬೆಳಗಿಸುವ ಮೂಲಕ ಮಾಡಲಾಗಿದ್ದು ವಿಶೇಷವಾಗಿತ್ತು. ತಾಯಂದಿರು ಹಾಗೂ ಶಿಶು ಅಭಿವೃದ್ಧಿಗೆ ಪೂರಕವಾದ ಆಹಾರ, ಔಷಧಿ, ಸ್ವಚ್ಛತೆ, ಚಿಕಿತ್ಸೆ ಮುಂತಾದವುಗಳ ಅಗತ್ಯತೆಯನ್ನು ತಿಳಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ ಕುಮಾರ್, ‘ಗರ್ಭಿಣಿಯರು ತಮ್ಮೊಡಲಲ್ಲಿ ಬೆಳೆಯುವ ಮಗುವಿಗೆ ಸಿಗಬೇಕಾದ ಪೋಷ್ಠಿಕಾಂಶಗಳನ್ನು ಕಾಲಕಾಲಕ್ಕೆ ಸೇವಿಸಬೇಕು. ಮೂಢನಂಬಿಕೆಗಳಿಗೆ ಬಲಿಯಾಗದೆ ವೈದ್ಯರ ಸಲಹೆ ಸೂಚನೆಗಳನ್ನು ಪಾಲಿಸಬೇಕು. ಗರ್ಭಿಣಿಯರು ತೆಗೆದುಕೊಳ್ಳುವ ಮುಂಜಾಗರೂಕತೆ ಮುಂದೆ ಮಗುವಿನ ಆರೋಗ್ಯ ವೃದ್ಧಿಸಲು ಸಹಕಾರಿಯಾಗುತ್ತದೆ. ತಾಯಿ ಹಾಲು ಅಮೃತದಂತೆ. ಮಗುವಿಗೆ ಅತ್ಯವಶ್ಯಕ’ ಎಂದು ಹೇಳಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ.ಕೆ.ಲಕ್ಷ್ಮೀದೇವಮ್ಮ ಮಾತನಾಡಿ, ‘ಮನೆಗಳ ಬಳಿಯೇ ಸೊಪ್ಪು ತರಕಾರಿಗಳನ್ನು ಬೆಳೆದುಕೊಂಡು ಬಳಸಬೇಕು. ಮನೆಯಲ್ಲಿ ಲಭ್ಯವಿರುವ ಬೇಳೆ ಕಾಳುಗಳನ್ನು ಮೊಳಕೆ ಬರಿಸಿ ತಿನ್ನುವುದರಿಂದ ಹೆಚ್ಚೆಚ್ಚು ಪೌಷ್ಠಿಕಾಂಶಗಳು ಸಿಗುತ್ತವೆ’ ಎಂದು ವಿವರಿಸಿದರು.
ಪುರಸಭಾ ಸದಸ್ಯೆ ಪ್ರಭಾವತಿ ಸುರೇಶ್, ಆಯುಷ್ ವೈದ್ಯಾರಾದ ಡಾ.ವಿಜಯಕುಮಾರ್, ಆರೋಗ್ಯ ಶಿಕ್ಷಕ ಕಿರಣ್‌ಕುಮಾರ್, ಕುಮಾರಸ್ವಾಮಿ, ಮಹಿಳಾ ಆರೋಗ್ಯ ಸಹಾಯಕಿಯರಾದ ವಿಜಯ, ಆದಮ್ಮ, ಮೇಲ್ವಿಚಾರಕರಾದ ಗಿರಿಜಾಂಬಾ, ಶಾಂತಾ, ರಾಧಮ್ಮ, ಸರೋಜಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -