‘ಗ್ರಾಮ ಭಾರತ’ ಅಂದರೆ ಈ ನಾಡ ಪ್ರಾಣ ಹಳ್ಳಿಯಲ್ಲಿದೆ ಎಂದರ್ಥ. ಆದರೆ ನಮ್ಮ ಹಳ್ಳಿಗಳಲ್ಲಿನ ಸಮಸ್ಯೆಗಳು ಹಲವಾರು. ರೇಷ್ಮೆ ಬೆಳೆಯ ಬೆಲೆ ಇಳಿಕೆ, ಕೃಷಿ ಅಧಿಕಾರಿಗಳ ವೈಫಲ್ಯತೆ, ಹೈನುಗಾರಿಕೆಯ ತೊಂದರೆಯ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್ ತಿಳಿಸಿದರು.
ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳ ‘ಗ್ರಾಮೀಣ ಜಾಗೃತಿ ಕಾರ್ಯಾನುಭವ’ ಕಾರ್ಯಕ್ರಮವನ್ನು ಗುರುವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮಗಳಿಗೆ ಬಂದಿದ್ದೀರಿ. ಗ್ರಾಮಗಳಲ್ಲಿನ ಸಮಸ್ಯೆಗಳನ್ನು ತೊಡೆದುಹಾಕಿ ಹಳ್ಳಿಗಳನ್ನು ಹಾಗೂ ಹಳ್ಳಿಯ ಜನರನ್ನು ಅಭಿವೃದ್ಧಿಯತ್ತ ಸಾಗಲು ಬೇಕಾದ ಪರಿಹಾರೋಪಾಯಗಳನ್ನು ಕಂಡುಹಿಡಿಯಿರು. ಗ್ರಾಮಸ್ಥರೊಂದಿಗೆ ಮುಕ್ತವಾಗಿ ಚರ್ಚಿಸಿ. ನಾವು ನಿಮಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಪದವಿ ಪಡೆದರೆ ಸಾಲದು ನೀವು ಹಳ್ಳಿಗಳಲ್ಲಿರುವ ಮೂರು ತಿಂಗಳಿನಲ್ಲಿ ಸ್ವಲ್ಪವಾದರೂ ಬದಲಾವಣೆಗಳು ಮೂಡಿದಲ್ಲಿ ನಿಮ್ಮ ಕಾರ್ಯಾನುಭವ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ, ಹಳ್ಳಿಗಳಲ್ಲಿನ ವೈಫಲ್ಯತೆಗಳನ್ನು ತಡೆಯಲು ವಿದ್ಯಾರ್ಥಿಗಳು ಮತ್ತು ಕೃಷಿ ಅಧಿಕಾರಿಗಳ ಪಾತ್ರವನ್ನು ವಿವರಿಸಿದರು.
ಕೃಷಿ ವಿದ್ಯಾರ್ಥಿ ಚಂದ್ರಮನು ಮಾತನಾಡಿ, ಕೃಷಿಯ ತಂತ್ರಜ್ಞಾನಗಳ ಬಗ್ಗೆ, ಮಣ್ಣಿನ ಫಲವತ್ತತೆಯ ಬಗ್ಗೆ, ಮಣ್ಣು ಮತ್ತು ನೀರಿನ ಪರೀಕ್ಷೆಯ ಬಗ್ಗೆ ಹಾಗೂ ರೇಷ್ಮೆಯ ಕುರಿತಂತೆ ಮಾತನಾಡಿ ತಮ್ಮ ಮೂರು ತಿಂಗಳ ಕಾರ್ಯಚಟುವಟಿಕೆಗಳ ಬಗ್ಗೆ ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್.ಎ.ದೇವರಾಜ್, ಎಸ್.ವಿ.ಮಂಜುನಾಥ್, ಕನ್ನಡ ಪ್ರಾಧ್ಯಾಪಕ ಕೃಷ್ಣಮೂರ್ತಿ, ರೈತ ಸಂಘದ ಗೋವಿಂದಪ್ಪ, ಎಂ.ಪಿ.ಸಿ.ಎಸ್ ಕಾರ್ಯದರ್ಶಿ ನಾರಾಯಣಸ್ವಾಮಿ, ಶ್ರೀರಾಮಪ್ಪ, ನಾರಾಯಣರೆಡ್ಡಿ, ಆಂಜಿನಪ್ಪ, ನಾರಾಯಣಸ್ವಾಮಿ, ನಾಗೇಶ್, ಕೃಷಿ ವಿಸ್ತರಣಾ ವಿಭಾಗದ ಪ್ರಾಧ್ಯಾಪಕ ಡಾ. ಶಿವಲಿಂಗಯ್ಯ ಹಾಜರಿದ್ದರು.
- Advertisement -
- Advertisement -
- Advertisement -