ಮುತ್ತು ಹುಡುಕಬೇಕಾದರೆ ನೀರಿಗೆ ಇಳಿಯಬೇಕು, ಹಾಗೆಯೇ ಬೆಳೆ ಬೆಳೆಯಲು ಮಣ್ಣಿಗೆ ಇಳಿಯಬೇಕು, ಕೃಷಿಗೆ ಮಣ್ಣೇ ಮುಖ್ಯ’ ಗ್ರಾಮಪಂಚಾಯಿತಿ ಉಪಾಧ್ಯಕ್ಷ ಚಿಕ್ಕನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ದನಮಿಟ್ಟೇನಹಳ್ಳಿಯಲ್ಲಿ ಗ್ರಾಮ ವಾಸ್ತವ್ಯಕ್ಕಾಗಿ ಬಂದಿರುವ ಕೃಷಿ ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಮೂರು ತಿಂಗಳ ಗ್ರಾಮೀಣ ಜಾಗೃತಿ ಕಾರ್ಯಾನುಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಗ್ರಾಮದಲ್ಲಿ ಕಲಿಕೆ ಹಾಗೂ ಕಲಿಸುವ ಕೆಲಸವನ್ನು ಮಾಡಬೇಕಿದೆ. ಸಮಸ್ಯೆಗಳ ಪರಿಹಾರೋಪಾಯಗಳನ್ನು ಕಂಡುಕೊಳ್ಳುತ್ತಾ ಗ್ರಾಮೀಣ ಭಾಗವನ್ನು ಸಶಕ್ತಗೊಳಿಸುವ ಕೆಲಸ ಎಳೆಯ ಮನಸ್ಸುಗಳಿಂದ ಆಗಲಿ ಎಂದು ಹೇಳಿದರು.
ಬೀಜವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಾಧ್ಯಾಪಕ ಡಾ.ವೆಂಕಪ್ಪ ಮಾತನಾಡಿ, ‘ಬೆಳೆ ಬೀಜ ಕೊಡುವುದರ ಜೊತೆಗೆ ಬಿತ್ತನೆಗೆ ಯೊಗ್ಯವಾಗಿರಬೇಕು. ಅದು ಸದೃಢವಾಗಿ ಬೆಳೆಯಬೇಕು. ಜೊತೆಗೆ ತನ್ನ ಜೀವನದ ಅಂತ್ಯದಲ್ಲಿ ಒಂದು ಹಿಡಿ ಬೀಜವನ್ನು ಕೊಟ್ಟು ಹೋಗಬೇಕು’ ಎಂದರು.
ಕೃಷಿ ವಿಸ್ತರಣಾ ವಿಭಾಗದ ಪ್ರಾಧ್ಯಾಪಕ ಡಾ.ವೈ.ಎನ್.ಶಿವಲಿಂಗಯ್ಯ ಮಾತನಾಡಿ, ‘ರೈತರ ಅನುಭವದ ಮುಂದೆ ವಿದ್ಯಾರ್ಥಿಗಳ ಕೃಷಿ ಜ್ಞಾನ ಸಾಗರದಲ್ಲಿ ಹನಿಯಂತೆ. ಮೂರು ತಿಂಗಳ ವಿದ್ಯಾರ್ಥಿಗಳ ಗ್ರಾಮ ವಾಸ್ತವ್ಯದ ಮುಖ್ಯ ಉದ್ದೇಶ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕೃಷಿ ಕಲಿಯುವುದು’ ಎಂದು ತಿಳಿಸಿದರು.
ಗ್ರಾಮಪಂಚಾಯತಿಯ ಸದಸ್ಯ ವೆಂಕಟರೆಡ್ಡಿ ಮಾತನಾಡಿ, ಮೂರು ತಿಂಗಳ ಗ್ರಾಮ ಶಿಬಿರಕ್ಕೆ ತಮ್ಮ ಹಳ್ಳಿಯ ರೈತರ ಸಹಕಾರವಿದೆ ಹಾಗೂ ಹಳ್ಳಿಯಲ್ಲಿ ಏಲ್ಲಾ ಪ್ರಗತಿಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಕೃಷಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು.
ರೈತ ಸಂಪರ್ಕ ಕೇಂದ್ರದ ಗಂಗಾಧರ, ರೈತರಿಗೆ ಮಣ್ಣು ಆರೋಗ್ಯ ಕಾರ್ಡನ್ನು ವಿತರಿಸಿದರು. ಕೃಷಿ ವಿವಿಯ ವಿದ್ಯಾರ್ಥಿನಿ ಕೆ.ವಿ.ಅರ್ಷಿಯಾ ಮೂರು ತಿಂಗಳುಗಳಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಬಗ್ಗೆ ಗ್ರಾಮಸ್ಥರಿಗೆ ತಿಳಿಸಿದರು, ಮಣ್ಣಿನ ಪರೀಕ್ಷೆ, ಅಣಬೆ ಬೇಸಾಯ, ಜೇನು ಸಾಕಾಣಿಕೆ, ಸಿರಿಧಾನ್ಯ ಮೌಲ್ಯ ವರ್ಧನೆ, ಸಮಗ್ರ ಕೃಷಿ ಪದ್ಧತಿ, ಸಮಗ್ರ ಕೀಟ ಹಾಗೂ ರೋಗ ನಿರ್ವಹಣೆಯ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಬಚ್ಚಪ್ಪ ಹಾಜರಿದ್ದರು.
- Advertisement -
- Advertisement -
- Advertisement -