ದೇವೇಗೌಡರ ಫೋಟೋ ಹಿಡಿದು ಬರುವವರನ್ನು ನಂಬಬೇಡಿ. ಹಣವನ್ನು ಚೆಲ್ಲಿ ಜನರನ್ನು ಗೆಲ್ಲಲು ಸಾಧ್ಯವಿಲ್ಲ. ಕ್ಷೇತ್ರದಲ್ಲಿನ ಬಂಡಾಯಕ್ಕೆ ಲಕ್ಷ್ಯ ಕೊಡಬೇಡಿ. ಈ ಕಾರ್ಯಕ್ರಮಕ್ಕೆ ಜನರು ಬರದಂತೆ ಕೆಲವರು ಪ್ರಯತ್ನ ನಡೆಸಿದ್ದು ತಿಳಿದಿದೆ. ಟ್ರಸ್ಟ್ ಹೆಸರಿನಲ್ಲಿ ದೇವಸ್ಥಾನಗಳಿಗೆ ಕಳುಹಿಸುವುದು, ಉಡುಗೊರೆ ಹಂಚುವುದು ಮುಂತಾದ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ದೇವೆಗೌಡರ ಹೆಸರೇಳಿಕೊಂಡು ಪಕ್ಷೇತರರಾಗಿ ಚುನಾವಣೆಯಲ್ಲಿ ನಿಲ್ಲುತ್ತಿರುವವರ ಮಾತನ್ನು ನಂಬದೆ ಶಾಸಕ ರಾಜಣ್ಣ ಅವರನ್ನು ಬೆಂಬಲಿಸಿ. ವಿರೋಧ ಪಕ್ಷದಲ್ಲಿದ್ದರೂ ತನ್ನ ಶಕ್ತಿ ಮೀರಿ ರಾಜಣ್ಣ ನಿಯತ್ತಾಗಿ ತಾಲ್ಲೂಕಿನ ಏಳಿಗೆಗಾಗಿ ದುಡಿದಿದ್ದಾರೆ. ಅವರನ್ನು ಆಶೀರ್ವದಿಸಿ. ಮುನಿಶಾಮಪ್ಪನವರು ನನಗೆ ತಂದೆ ಸಮಾನರು. ಒಂದು ಕಾಲದಲ್ಲಿ ಅವರನ್ನು ದಾರಿ ತಪ್ಪಿಸಿದ್ದವರೇ ಈಗ ಬಂಡಾಯವೆದ್ದು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ನನಗೆ ಶಕ್ತಿ ತುಂಬಲು ರಾಜಣ್ಣನನ್ನು ಬೆಂಬಲಿಸಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ವಿಕಾಸಪರ್ವ ಸಮಾವೇಶದಲ್ಲಿ ಅವರು ಮಾತನಾಡಿದರು.
ಅಭಿವೃದ್ಧಿ ಮತ್ತು ಲಂಚಮುಕ್ತ ರಾಜ್ಯವನ್ನು ನಿರ್ಮಿಸುವುದೇ ನನ್ನ ಗುರಿ. ರಾಜ್ಯದಾದ್ಯಂತ ನಿರಂತರವಾಗಿ ಓಡಾಡುತ್ತಿದ್ದೇನೆ. ಜನತಾ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದೇನೆ. ಕಾಂಗ್ರೆಸ್ ಅಥವಾ ಬಿಜೆಪಿ ಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಾರೆ ಎಂದು ಕೆಲವರು ಆಡಿಕೊಳ್ಳಬಹುದು. ಆದರೆ ನಾವು ಈ ಎರಡೂ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ನಮ್ಮ ಗುರಿ ಏನಿದ್ದರೂ 113 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು.
ಥೈಲೆಂಡ್ ದೇಶದಲ್ಲಿ ರೇಷ್ಮೆಯಿಂದ 30 ಬಗೆಯ ಉತ್ಪನ್ನಗಳನ್ನು ತಯಾರಿಸುತ್ತಾರೆ. ನಮ್ಮಲ್ಲೂ ಅದನ್ನು ಪ್ರಾರಂಭಿಸುವ ಮೂಲಕ ರೇಷ್ಮೆಯನ್ನು ನಂಬಿದ ರೈತರ ಆರ್ಥಿಕ ಮಟ್ಟವನ್ನು ಸುಧಾರಣೆ ಮಾಡುತ್ತೇನೆ. ರೈತರ ಆತ್ಮಹತ್ಯೆಯು ನಿಲ್ಲಬೇಕು. ರೈತರು ಇತರರಿಗೆ ಕೈ ಎತ್ತಿ ನೀಡುವಂತೆ ಅವರನ್ನು ಸಶಕ್ತರನ್ನಾಗಿ ಮಾಡುವ ಹಲವು ಯೋಜನೆಗಳು ರೂಪಿಸುತ್ತೇನೆ ಎಂದು ಅವರು ತಿಳಿಸಿದರು.
ಜನರು ಆಶೀರ್ವದಿಸಿ ನಾವು ಅಧಿಕಾರಕ್ಕೆ ಬಂದರೆ ಜನರ ಸಮಸ್ಯೆಗಳನ್ನು ನಿವಾರಿಸಲು ಹಲವು ಯೋಜನೆಗಳನ್ನು ರೂಪಿಸಲಿದ್ದೇನೆ. ಸಿದ್ದರಾಮಯ್ಯನವರು ರೈತರ ೫೦,೦೦೦ ರೂ ಸಾಲ ಮನ್ನಾ ಮಾಡಿದ್ದು, ಇದುವರೆವಿಗೊ ಹಣ ಬಿಡುಗಡೆ ಮಾಡಿಲ್ಲ, ಜೆ.ಡಿ.ಎಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ರೈತರ ಎಲ್ಲಾ ಬ್ಯಾಂಕುಗಳ ಸಂಪೂರ್ಣ ಸಾಲ ಸುಮಾರು ೫೧,೦೦೦ ಸಾವಿರ ಕೋಟಿ, ಹಾಗೂ ಸ್ತ್ರೀ ಶಕ್ತಿ ಗುಂಪುಗಳ ೪,೩೦೦ ಕೋಟಿ ರೂ ಹಣವನ್ನು ಸಂಪೂರ್ಣ ಮನ್ನಾ ಮಾಡುತ್ತೇವೆ. ರೈತರು ಮತ್ತೆ ಸಾಲಗಾರರಾಗದಂತೆ ಆಗದೆ ಇರಲು ಹೊಸ ಕೃಷಿ ನೀತಿ ಜಾರಿ ಮಾಡಲಾಗುವುದು. ಇತ್ತಿಚೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿದ್ದ ಆಲಿಕಲ್ಲು ಮಳೆಯಿಂದ ಸುಮಾರು ಕೋಟಿ ಹಣ ದ್ರಾಕ್ಷಿ ಬೆಳೆ ಹಾನಿಯಿಂದ ನಷ್ಟ ಉಂಟಾಗಿದ್ದು, ಯಾವುದೇ ಪಕ್ಷ ಇದರ ಬಗ್ಗೆ ಪ್ರಸ್ತಾವನೆ ಮಾಡಿಲ್ಲ.
ಕಾಂಗ್ರೇಸ್ ಮತ್ತು ಬಿ.ಜೆ.ಪಿ ಪಕ್ಷಗಳು ರೈತರಿಗೆ ಶಾಶ್ವತ ನೀರಾವರಿ ಜಾರಿ ಮಾಡುವುದಾಗಿ ತಿಳಿಸಿದ್ದರೂ ಈಗ ಕೊಳಚೆ ನೀರನ್ನು ಶುದ್ದೀಕರಣ ಮಾಡಿ ಕೊಡುವುದಾಗಿ ಹೇಳುತ್ತಿದ್ದಾರೆ. ವಿಷಯುಕ್ತ ನೀರು ಕುಡಿಯುವುದರಿಂದ, ಬೆಳೆಯುವ ಬೆಳೆಗೆ ವಿಷಯುಕ್ತ ನೀರು ಹರಿಸುವುದರಿಂದ ಸಾರ್ವಜನಿಕರು, ರೋಗ ಪೀಡಿತರಾಗುವುದರಲ್ಲಿ ಸಂದೇಹವಿಲ್ಲ. ಎಲ್ಲೆಂದರಲ್ಲಿ ಮದ್ಯ ಸಿಗುವಂತೆ ಮಾಡಿ ನಿಮ್ಮ ಹಣವನ್ನು ದೋಚಿ ಅನ್ನ ಭಾಗ್ಯ ಎಂದು ಹೇಳಿ ಕೊಡುತ್ತಾರೆ. ಈ ಬಗ್ಗೆ ಜನರು ತಿಳಿಯಬೇಕು.
ಒಂದು ಬಾರಿ ಜೆ.ಡಿ.ಎಸ್ ಪಕ್ಷವನ್ನು ಅಧಿಕಾರಕ್ಕೆ ತಂದಲ್ಲಿ ಸಾರ್ವಜನಿಕರು ಕಟ್ಟುವ ತೆರಿಗೆಯನ್ನು ಒಂದು ನಯಾಪೈಸೆ ದುರುಪಯೋಗವಾಗದಂತೆ ನೋಡಿಕೊಳ್ಳುತ್ತೇವೆ. ಕೆರೆಗಳಿಗೆ ನೀರು ಹರಿಸುತ್ತೇವೆ. ಗರ್ಭಿಣಿಯರಿಗೆ ೬ ತಿಂಗಳು ಕಾಲ ೬,೦೦೦ ದಂತೆ ೩೬,೦೦೦ ಹಣ ನೀಡಲಾಗುವುದು. ಹಿರಿಯ ನಾಗರಿಕರಿಗೆ ನೆಮ್ಮದಿಯ ಸಂತೋಷ ಜೀವನ ಮಾಡಲು ಜೀವನ ಪರ್ಯಂತ ೫,೦೦೦ ಪೆನ್ಷನ್ ನೀಡುತ್ತೇವೆ, ಅವಿದ್ಯಾವಂತ ಹೆಣ್ಣು ಮಕ್ಕಳು, ಹಾಗೊ ನಿರುದ್ಯೋಗಿಗಳಿಗೆ ಸಸಿ ನೆಟ್ಟು ಬೆಳೆಸುವ ಕೆಲಸ ನೀಡಿ, ೫,೦೦೦ ಸಂಬಳ ನೀಡುವುದಾಗಿ ಅವರು ಹೇಳಿದರು.
ಹೆಲಿಕಾಪ್ಟರ್‌ನಲ್ಲಿ ಕೇಶವಾಪುರ ಗ್ರಾಮಕ್ಕೆ ಬಂದಿಳಿದ ಜೆ.ಡಿ.ಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು. ಬೈಕ್‌ಗಳಲ್ಲಿ ಪಕ್ಷದ ಕಾರ್ಯಕರ್ತರು ರ್‍ಯಾಲಿ ನಡೆಸಿದರೆ, ಮಹಿಳೆಯರು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿದರು. ದಾರಿಯುದ್ದಕ್ಕೂ ಹೂವನ್ನು ಎರಚುತ್ತಾ ಅವರನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು.
ಶಾಸಕ ಎಂ.ರಾಜಣ್ಣ, ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು, ಚಿಕ್ಕಬಳ್ಳಾಪುರ ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ, ತಾಲ್ಲೂಕು ಜೆ.ಡಿ.ಎಸ್ ಅದ್ಯಕ್ಷ ಡಾ.ಧನುಂಜಯರೆಡ್ಡಿ, ನಗರಸಭಾ ಅಧ್ಯಕ್ಷ ಅಫ್ಸರ್ ಪಾಷ, ಜಿಲ್ಲಾ ಪಂಚಾಯಿತಿ ಸದಸ್ಯ ಡಾ.ಜಯರಾಮರೆಡ್ಡಿ, ಜೆ.ಡಿ.ಎಸ್ ರಾಜ್ಯ ಮುಖಂಡ ಕೊಟ್ಟಿಗೆರೆ ಮಂಜುನಾಥ್ ಹಾಜರಿದ್ದರು.
ದೇವೆಗೌಡರ ಹೆಸರೇಳಿಕೊಂಡು ಪಕ್ಷೇತರರಾಗಿ ನಿಲ್ಲುತ್ತಿರುವವರ ಮಾತನ್ನು ನಂಬದೆ ಶಾಸಕ ರಾಜಣ್ಣ ಅವರನ್ನು ಬೆಂಬಲಿಸಿ – ಎಚ್.ಡಿ.ಕುಮಾರಸ್ವಾಮಿ
- Advertisement -
- Advertisement -
- Advertisement -
- Advertisement -