ಜೆಡಿಎಸ್ ಬಂಡಾಯ ಅಭ್ಯರ್ಥಿ ಬಿ.ಎನ್.ರವಿಕುಮಾರ್ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ್ದನ್ನು ದಾಖಲೆ ಸಮೇತ ರುಜುಪಡಿಸಲಿ, ಬಹಿರಂಗ ಚರ್ಚೆಗೆ ಬರಲಿ. ನನ್ನ ತಪ್ಪುಗಳಿದ್ದಲ್ಲಿ ಶಿಕ್ಷೆಗೆ ಗುರಿಯಾಗಲು ಸಿದ್ಧವಿದ್ದೇನೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದಲ್ಲಿ ತಮ್ಮ ಸ್ವಗೃಹದಲ್ಲಿ ಶುಕ್ರವಾರ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಜೆಡಿಎಸ್ ಪಕ್ಷದ ವರ್ಚಸ್ಸಿನಿಂದ ಅವರೂ ಸೇರಿದಂತೆ ನಾವೆಲ್ಲಾ ಬೆಳೆದಿದ್ದೇವೆ. ಪಕ್ಷದಿಂದ ಬೆಳೆದು ಪಕ್ಷದ ಅಧಿಕೃತ ಅಭ್ಯರ್ಥಿಯ ಮೇಲೆ ಇಲ್ಲಸಲ್ಲದ ಆರೋಪ ಮಾಡುವುದು ಆರೋಗ್ಯಕರ ಬೆಳವಣಿಗೆಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಸ್ಪರ್ಧಿಸಿ ಜನರ ಮುಂದೆ ಹೋಗಬಹುದು. ದಾಖಲೆಗಳಿಲ್ಲದೆ ವೃಥಾ ಆರೋಪ ಮಾಡುವುದು ತರವಲ್ಲ ಎಂದು ಹೇಳಿದರು.
ನಿಷ್ಠಾವಂತರ ಬಳಗ ಎಂದು ಹೇಳಿಕೊಳ್ಳುವ ಬಿ.ಎನ್.ರವಿಕುಮಾರ್ ಅವರು ತಮ್ಮ ಸುತ್ತಮುತ್ತ ಇರುವವರ ರಾಜಕೀಯ ಇತಿಹಾಸವನ್ನು ಒಮ್ಮೆ ಆತ್ಮಾವಲೋಕನ ಮಾಡಿಕೊಂಡು ನೋಡಲಿ. ಪಕ್ಷಾಂತರಿಗಳು, ಹಣದ ಆಮಿಷಕ್ಕೆ ಒಳಗಾದವರು ಇವರ ಸುತ್ತ ಇದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಇವರು ಟ್ರಸ್ಟ್ ರಚಿಸಿಕೊಂಡು ಸಮಾಜಸೇವೆ ನೆಪದಲ್ಲಿ ಹಣ ಖರ್ಚು ಮಾಡಿದ್ದಾರೆ. ಜೆಡಿಎಸ್ ಎಂಬ ಕುಟುಂಬದ ಸದಸ್ಯರಾಗಿ ದೋಷಾರೋಪಣೆ ಮಾಡಬಾರದು. ಬಿ.ಎನ್.ರವಿಕುಮಾರ್ ಸೇರಿದಂತೆ ಜೆಡಿಎಸ್ ಪಕ್ಷದ ಎಲ್ಲರ ಶ್ರಮದಿಂದ ನಾನು ಶಾಸಕನಾದೆ ಅದಕ್ಕೆ ಕಾರ್ಯಕರ್ತರಿಗೆ ಋಣಿಯಾಗಿದ್ದೇನೆ. ನಾನೂ ಯಾವುದೇ ಸ್ವಜನ ಪಕ್ಷಪಾರ, ಭ್ರಷ್ಟಾಚಾರ ಎಸಗಿಲ್ಲ. ಸುಳ್ಳು ಆರೋಪ ಮಾಡುವವರು ದಾಖಲೆ ಒದಗಿಸಿ ಎಂದು ಹೇಳಿದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಧನಂಜಯರೆಡ್ಡಿ ಮಾತನಾಡಿ, ಜೆಡಿಎಸ್ ಬಂಡಾಯ ಅಭ್ಯರ್ಥಿ ಬಿ.ಎನ್.ರವಿಕುಮಾರ್, ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟಿದ್ದು ನಾನೇ ಎಂದು ಹೇಳಿರುವುದು ಹಾಸ್ಯಾಸ್ಪದವಾಗಿದೆ. ಅವರು ಪಕ್ಷಕ್ಕೆ ಬಂದದ್ದೇ 2002 ರಲ್ಲಿ. ಪಕ್ಷಕ್ಕೆ ಭದ್ರ ಅಡಿಪಾಯ ಹಾಕಿದ್ದು ದಿ.ಮುನಿಶಾಮಪ್ಪನವರು. ರವಿಕುಮಾರ್ ಸುತ್ತ ಇರುವವರು ಪಕ್ಷಾಂತರಿಗಳು. ಅವರು ಯಾರೂ ಪಕ್ಷವನ್ನು ಕಷ್ಟಕಾಲದಲ್ಲಿ ಸಂಘಟಿಸಿದವರಲ್ಲ. ಹೋರಾಟಗಳಲ್ಲಿ, ಧರಣಿಗಳಲ್ಲಿ, ಕಾರ್ಯಕರ್ತರ ಕಷ್ಟಗಳಿಗೆ ಸ್ಪಂದಿಸಿದವರಲ್ಲ. ಕುಮಾರಣ್ಣನವರ ಕಾರ್ಯಕ್ರಮಕ್ಕೆ ಹದಿನೈದು ದಿನಗಳ ಕಾಲ ನಿದ್ದೆಗೆಟ್ಟು ಜನರನ್ನು ಸಂಘಟಿಸಿದ್ದೇವೆ. ಬೇರೆಡೆಯಿಂದ ಜನರನ್ನು ಕರೆತಂದಿದ್ದಾರೆ, ವಿ.ಮುನಿಯಪ್ಪ ಜನರನ್ನು ಕಳಿಸಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಐದು ವರ್ಷದ ಜನರ ಸೇವೆ, ಪ್ರಾಮಾಣಿಕತೆ, ಜೆಡಿಎಸ್ ಪಕ್ಷದೆಡೆಗಿನ ನಿಷ್ಠೆ ಜನರನ್ನು ಕರೆತರುವಲ್ಲಿ ಯಶಸ್ವಿಯಾಗಿದೆ. ವಾಮ ಮಾರ್ಗದ ಮೂಲಕ ತಪ್ಪು ಮಾಹಿತಿಯನ್ನು ಜನರಿಗೆ ಕೊಡಬೇಡಿ. ತಪ್ಪಿದ್ದರೆ ತಲೆ ಬಗ್ಗಿಸುತ್ತೇವೆ. ಎಲ್ಲಾ ತಿಳಿದಿರುವ ಜನರೇ ತೀರ್ಮಾನ ಕೊಡುತ್ತಾರೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಅಫ್ಸರ್‌ಪಾಷ, ರಾಜ್ಯ ಮುಖಂಡ ಕೋನಪ್ಪರೆಡ್ಡಿ, ಲಕ್ಷ್ಮೀನಾರಾಯಣ, ರಹಮತ್ತುಲ್ಲ, ಕನಕಪ್ರಸಾದ್, ಕೆ.ಮಂಜುನಾಥ್, ಪ್ರಭಾಕರರೆಡ್ಡಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -