ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಸೋಮವಾರ ಕರೆನೀಡಿದ್ದ ‘ಭಾರತ್ ಬಂದ್’ಗೆ ನಗರದಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು.
ಸಾರಿಗೆ ಬಸ್ ಸಂಚಾರವಿರಲಿಲ್ಲ. ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್‌ಗಳು ಸಾಲಾಗಿ ನಿಂತಿದ್ದವು. ಶಾಲಾ ಕಾಲೇಜುಗಳು ರಜೆ ಘೋಷಿಸಿದ್ದವು. ವಿವಿಧ ಕಚೇರಿಗಳು, ಬ್ಯಾಂಕ್, ಪೆಟ್ರೋಲ್ ಬಂಕ್‌ಗಳು, ಚಿತ್ರಮಂದಿರ, ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು ಮುಚ್ಚಿದ್ದವು. ರೇಷ್ಮೆ ಗೂಡಿನ ಮಾರುಕಟ್ಟೆಗೆ ಆಗಮಿಸಿದ್ದ ಗೂಡಿನ ಪ್ರಮಾಣ ಕಡಿಮೆಯಾಗಿದ್ದರೂ ವ್ಯಾಪಾರ ವಹಿವಾಟು ನಡೆಯಿತು.
ಕಾಂಗ್ರೆಸ್‌ನ ಕೆಲವು ಕಾರ್ಯಕರ್ತರು ಬೈಕ್‌ಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು. ನಗರದ ಪ್ರವಾಸಿ ಮಂದಿರದ ಬಳಿ ಕಾಂಗ್ರೆಸ್‌ನ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಶಾಸಕ ವಿ.ಮುನಿಯಪ್ಪ, ‘ಪ್ರಧಾನಿ ನರೇಂದ್ರ ಮೋದಿ ಅವರು ಜನಸಾಮಾನ್ಯರ ಅನುಕೂಲಕ್ಕಾಗಿ ಕೆಲಸ ಮಾಡುತ್ತಿಲ್ಲ, ಕೇವಲ ಕಾರ್ಪೊರೇಟ್ ಕಂಪೆನಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ. ತೈಲ ಬೆಲೆ ಏರಿಕೆ ಖಂಡಿಸಿ ಮಾತ್ರವಲ್ಲದೆ, ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಪತನ ಕಾಣುತ್ತಿರುವುದು ಮತ್ತು ರಫೆಲ್ ಡೀಲ್ ಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ(ಜೆಪಿಸಿ) ರಚಿಸಲು ಒತ್ತಾಯಿಸಿ ಬಂದ್ ಆಚರಿಸಲಾಗುತ್ತಿದೆ. ಶಾಂತಿಯನ್ನು ಕಾಪಾಡಿಕೊಂಡು ಬಂದ್ ಆಚರಿಸಬೇಕು’ ಎಂದು ಹೇಳಿದರು.
- Advertisement -
- Advertisement -
- Advertisement -