ವಿಷ್ಣುವರ್ಧನ್ ಅವರ ಪ್ರತಿಯೊಂದು ಚಿತ್ರಗಳು ಸಹ ಕೌಟುಂಬಿಕ ಪ್ರಧಾನವಾಗಿತ್ತು. ಅವರು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಜತೆಯಲ್ಲೆ ಹೊಸ ಆಯಾಮ ಸೃಷ್ಟಿಸಲು ಕಾರಣವಾಗಿದ್ದರು. ಡಾ.ವಿಷ್ಣುವರ್ಧನ್ ಅವರ ಸಾಧನೆಯ ನೆನಪು ಕೋಟ್ಯಂತರ ಅಭಿಮಾನಿಗಳಲ್ಲಿ ಶಾಶ್ವತವಾಗಿದೆ ಎಂದು ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹಸುರಪ್ಪನವರ ಅರವಿಂದ್ ತಿಳಿಸಿದರು.
ತಾಲ್ಲೂಕಿನ ಮೇಲೂರಿನ ಚಂಗಲರಾಯರೆಡ್ಡಿ ವೃತ್ತದಲ್ಲಿ ಮಂಗಳವಾರ ವಿಷ್ಣುವರ್ಧನ್ ಅಭಿಮಾನಿಗಳು ಕೇಕ್ ಕತ್ತರಿಸಿ, ಅನ್ನಸಂತರ್ಪಣೆ ನಡೆಸುವ ಮೂಲಕ ಸಾಹಸ ಸಿಂಹ ಡಾ ವಿಷ್ಣುವರ್ಧನ್ ಅವರ ಜನ್ಮ ದಿನವನ್ನು ಆಚರಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ವಿಷ್ಣುವರ್ಧನ್ ಅವರು ಕೇವಲ ದಿಗ್ಗಜ ನಟ ಮಾತ್ರವಲ್ಲ, ಅದೇಷ್ಟೋ ಪ್ರತಿಭೆಗಳಿಗೆ ಸ್ಫೂರ್ತಿ. ಅವರ ಜೀವನ ಶೈಲಿ, ಅವರ ನಟನೆಯನ್ನ ನೋಡಿ ಚಿತ್ರರಂಗಕ್ಕೆ ಬಂದವರು ಅನೇಕರು. ಅವರ ಮಾರ್ಗದರ್ಶನದಲ್ಲಿ ಬೆಳೆದವರು ಹಲವರು. ಉತ್ತಮ ನಟನೆಯ ಮೂಲಕ ಅನೇಕರನ್ನು ಪ್ರಭಾವಿಸಿರುವ ಅವರು ತಮ್ಮ ಜೀವನದುದ್ದಕ್ಕೂ ಸಮಾಜಸೇವೆಯಲ್ಲಿ ತೊಡಗಿದ್ದರು ಎಂದು ಹೇಳಿದರು.
ಭಾರತಿ ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಎಂ.ಕೆ.ರವಿಪ್ರಸಾದ್ ಮಾತನಾಡಿ, ಕನ್ನಡಿಗರ ಹೃದಯದಲ್ಲಿ ಸಿಂಹ ಘರ್ಜನೆ ನಿರಂತರವಾಗಿರುತ್ತದೆ. ವಿಷ್ಣುವರ್ಧನ್ ಭಾರತ ಚಿತ್ರರಂಗ ಕಂಡ ಅತ್ಯಂತ ಸ್ಫುರದ್ರೂಪಿ ನಟರಲ್ಲೊಬ್ಬರು, ತಮ್ಮ ಪ್ರತಿಭೆ-, ವ್ಯಕ್ತಿತ್ವದಿಂದಲೇ ಮನೆಮಾತಾದ ನಮ್ಮೆಲ್ಲರ ನಲ್ಮೆಯ ‘ಅಭಿನಯ ಭಾರ್ಗವ’ಡಾ. ವಿಷ್ಣುವರ್ಧನ್ ಅವರ ಪ್ರೀತಿ-ಆದರ್ಶಗಳು ಎಲ್ಲಾ ಪೀಳಿಗೆಗೂ ದಾರಿದೀಪವಿದ್ದಂತೆ ಎಂದರು.
ಶ್ರೀನಿವಾಸ್(ದಾಸ್), ಮಹೇಶ್, ಧರ್ಮೇಂದ್ರ, ಆರ್.ಎ.ಉಮೇಶ್, ಗೋಪಾಲ್ ಹಾಜರಿದ್ದರು.
- Advertisement -
- Advertisement -
- Advertisement -