ನಗರದ ರೈತ ಸಂಘದ ನಗರ ಘಟಕದ ಕಚೇರಿಯಲ್ಲಿ ಶ್ರೀರಾಮ ರೈತ ಆಸಕ್ತ ಗುಂಪು ಮತ್ತು ಶ್ರೀಆಂಜನೇಯ ರೈತ ಆಸಕ್ತ ಗುಂಪುಗಳ ಸದಸ್ಯರಿಗೆ ಉಳಿತಾಯದ ಹಣದಿಂದ ಸಂಕ್ರಾಂತಿ ಹಬ್ಬದ ಉಡುಗೊರೆಯಾಗಿ ಒಂದು ಸಾವಿರ ರೂ ಮತ್ತು ನೀರಿನ ಕ್ಯಾನ್ ವಿತರಿಸಿ ರೇಷ್ಮೆ ರೈತರ ಉತ್ಪಾದಕ ಕಂಪನಿಯ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿರೆಡ್ಡಿ ಮಾತನಾಡಿದರು.
ರೈತ ಆಸಕ್ತ ಗುಂಪುಗಳು ಒಗ್ಗೂಡಿ ಕ್ರಿಯಾಶೀಲವಾಗಿ ಕೆಲಸ ಮಾಡಿದಲ್ಲಿ ಎಲ್ಲಾ ರೈತರ ಅಭ್ಯುದಯಕ್ಕೆ ನಾಂದಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಅವರು ತಿಳಿಸಿದರು.
ಎರಡೂ ರೈತ ಆಸಕ್ತ ಗುಂಪುಗಳು ಶಿಸ್ತು ಮತ್ತು ಬದ್ಧತೆಯಿಂದ ಪ್ರಗತಿಯನ್ನು ಸಾಧಿಸಿ ಹಣವನ್ನು ಉಳಿತಾಯ ಮಾಡಿದ್ದಾರೆ. ತಾವು ಉಳಿತಾಯ ಮಾಡಿರುವ ಹಣದಲ್ಲಿ ಸ್ವಲ್ಪ ಭಾಗವನ್ನು ತಮ್ಮ ಸದಸ್ಯರಿಗೆ ನೀಡುವ ಮೂಲಕ ಉತ್ತೇಜನ ನೀಡುತ್ತಿರುವುದು ಶ್ಲಾಘನೀಯ ಎಂದರು. ಇನ್ನೂ ಮುಂದುವರಿದು ರೈತ ಆಸಕ್ತ ಗುಂಪುಗಳು ಫ್ಲೋರ್ ಮಿಲ್, ಉಪ್ಪಿನಕಾಯಿ ಘಟಕ ಅಥವಾ ರೈತರಿಗೆ ಉಪಯುಕ್ತ ಯಂತ್ರಗಳನ್ನು ತರಿಸಿ ಬಾಡಿಗೆಗೆ ನೀಡುವ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು ಎಂದರು.
ರೇಷ್ಮೆ ರೈತರ ಉತ್ಪಾದಕ ಕಂಪನಿಯ ಸಿಇಒ ಕೆ.ಎನ್.ಜನಾರ್ಧನಮೂರ್ತಿ ಮಾತನಾಡಿ, ನಗರದಲ್ಲಿರುವ ಎರಡೂ ರೈತ ಆಸಕ್ತ ಗುಂಪುಗಳು ಪ್ರತಿ ತಿಂಗಳೂ ಎರಡು ಸಭೆಗಳನ್ನು ನಡೆಸುತ್ತಾ ಬಂದಿರುವರು. ಅದರಲ್ಲಿ ಸದಸ್ಯರು ತಲಾ 200 ರೂ ಉಳಿತಾಯ ಮಾಡುತ್ತಾ, ಸದಸ್ಯರಿಗೆ ಸಾಲವನ್ನೂ ನೀಡುತ್ತಾ ಬಂದಿರುವರು. ಅದರಲ್ಲಿ ಬಂದ ಲಾಭಾಂಶದಲ್ಲಿ ಒಂದು ಭಾಗವನ್ನು ಸಂಕ್ರಾಂತಿಯ ಉಡುಗೊರೆಯಾಗಿ ಸದಸ್ಯರಿಗೆ ನೀಡಿದ್ದಾರೆ. ಇದು ಇತರರಿಗೂ ಮಾದರಿಯಾಗಲಿ ಎಂದು ಹೇಳಿದರು.
ರೈತ ಆಸಕ್ತ ಗುಂಪುಗಳ ಸದಸ್ಯರಾದ ಬಿ. ನಾರಾಯಣಸ್ವಾಮಿ, ರಾಮಕೃಷ್ಣಪ್ಪ, ವೇಣುಗೋಪಾಲ್, ಅನಂತ ಪದ್ಮನಾಭ, ದೇವರಾಜ್ ಹಾಜರಿದ್ದರು.
- Advertisement -
- Advertisement -
- Advertisement -