ಶ್ರೀ ಕೃಷ್ಣ ಕಲಾಕುಂಜ ವಿದ್ಯಾರ್ಥಿಗಳಿಂದ ನೃತ್ಯೋತ್ಸವ

0
437

ಶ್ರೀ ಕೃಷ್ಣ ಕಲಾಕುಂಜ ನೃತ್ಯ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ನಗರದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ನೃತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ರಾಜ್ಯ ಸರ್ಕಾರದ ನಿವೃತ್ತ ಉಪಕಾರ್ಯದರ್ಶಿ ಎಚ್.ವಿ.ರಾಮಚಂದ್ರರಾವ್ ಅವರು ಮಾತನಾಡಿದರು.
ನಮ್ಮ ಸಾಂಪ್ರದಾಯಿಕ ಕಲೆಯಾದ ಭರತನಾಟ್ಯವನ್ನು ಗ್ರಾಮೀಣ ಪ್ರದೇಶದ ಮಕ್ಕಳಿಗೂ ಶಾಸ್ತ್ರಬದ್ದ ಹಾಗು ಸಮಕಾಲೀನ ಪದ್ದತಿಯಲ್ಲಿ ಕಲಿಸುವ ಮೂಲಕ ಇದು ಪ್ರವೃತ್ತಿಯಷ್ಟೇ ಅಲ್ಲ ವೃತ್ತಿಯನ್ನಾಗಿಯೂ ಮಾಡಿಕೊಳ್ಳಬಹುದು ಎಂಬುದನ್ನು ಶ್ರೀ ಕೃಷ್ಣ ಕಲಾಕುಂಜ ನೃತ್ಯ ಸಂಸ್ಥೆಯವರು ಸಾಬೀತು ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಕಳೆದ ಆರು ವರ್ಷಗಳ ಹಿಂದೆ ಶಿಡ್ಲಘಟ್ಟದಲ್ಲಿ ಶುರುವಾದ ಶ್ರೀ ಕೃಷ್ಣ ಕಲಾಕುಂಜ ನೃತ್ಯ ಸಂಸ್ಥೆ ಇದೀಗ ಜಿಲ್ಲೆಯ ಚಿಕ್ಕಬಳ್ಳಾಪುರ ಸೇರಿದಂತೆ ಮುದ್ದೇನಹಳ್ಳಿ, ಗೌರಿಬಿದನೂರು, ಗುಡಿಬಂಡೆ ಹಾಗೂ ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದವರೆಗೂ ಚಾಚಿ ಸುಮಾರು 500 ಕ್ಕೂ ಹೆಚ್ಚು ಮಕ್ಕಳಿಗೆ ಭರತನಾಟ್ಯ ನೃತ್ಯತರಬೇತಿ ನೀಡುತ್ತಿರುವುದು ಶ್ಲಾಘನೀಯ ಸಂಗತಿ ಎಂದರು.
ಈ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳನ್ನು ಕೇವಲ ಪುಸ್ತಕಗಳಿಗಷ್ಟೇ ಸೀಮಿತಗೊಳಿಸದೇ ಪಠ್ಯೇತರ ಕಲೆಗಳನ್ನು ಕಲಿಯುವಂತೆ ಪ್ರೇರೇಪಿಸಬೇಕು. ಸಾಂಸ್ಕೃತಿಕ ನೃತ್ಯ ಪ್ರಕಾರವು ಎಲ್ಲರಿಗೂ ಒಲಿಯುವುದಿಲ್ಲ. ಆಸಕ್ತಿ ಇರುವ ಮಕ್ಕಳಿಗೆ ಉತ್ತೇಜನ ನೀಡಬೇಕಾದ್ದು ಹಿರಿಯರ ಕರ್ತವ್ಯ ಎಂದರು.
ಸರಸ್ವತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್.ಶ್ರೀಕಾಂತ್ ಮಾತನಾಡಿ, ಭರತನಾಟ್ಯ ಹಾಗೂ ಕೊರಿಯೋಗ್ರಫಿ (ನೃತ್ಯ ಸಂಯೋಜನೆ) ಯಲ್ಲಿ ಸ್ನಾತಕೋತ್ತರ ಪದವೀಧರರಾದ ಪವನ್‌ಕುಮಾರ್ ನೃತ್ಯವನ್ನೇ ತಮ್ಮ ಉಸಿರಾಗಿಸಿಕೊಂಡು, ಅದನ್ನು ತನ್ನ ಹುಟ್ಟೂರು ಹಾಗೂ ಸುತ್ತ ಮುತ್ತಲಿನ ಗ್ರಾಮೀಣ ಭಾಗದ ಮಕ್ಕಳಿಗೆ ಕಲಿಸುತ್ತಿರುವುದು ನಿಜಕ್ಕೂ ಅಭಿನಂದನೀಯ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಕಲಾಕುಂಜದ ಸುಮಾರು ೧೦೦ ಕ್ಕೂ ಹೆಚ್ಚು ಮಕ್ಕಳು ಭರತನಾಟ್ಯದ ವಿವಿಧ ನೃತ್ಯಗಳನ್ನು ಪ್ರದರ್ಶಿಸುವುದರೊಂದಿಗೆ ಭಾಗವಹಿಸಿದ್ದ ಪೋಷಕರು ಹಾಗೂ ಗಣ್ಯರ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮದಲ್ಲಿ ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ಟಿ.ಎ.ಕೃಷ್ಣಯ್ಯಶೆಟ್ಟಿ, ಶ್ರೀ ಕೃಷ್ಣ ಕಲಾಕುಂಜದ ನಿರ್ದೇಶಕರಾದ ಜಿ.ಪವನ್‌ಕುಮಾರ್, ಜಿ.ಶರತ್‌ಕುಮಾರ್, ಮಾನಸಪವನ್‌ಕುಮಾರ್, ಟಿ.ಎಸ್.ಶರತ್ ಹಾಜರಿದ್ದರು.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!