ಶಿಡ್ಲಘಟ್ಟ ತಾಲ್ಲೂಕಿನ ಕಾಚನಾಯಕನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ ಶಿಡ್ಲಘಟ್ಟ ಸಾಮಾಜಿಕ ಅರಣ್ಯ ವಲಯ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಲಾಗಿದ್ದ ಹಸಿರು ಕರ್ನಾಟಕ ಆಂದೋಲನದಡಿ ಸಸಿ ನೆಡುವ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ ಮಾತನಾಡಿದರು.
ನೀರಿನ ಬವಣೆಯಿಂದ ಬೇಸತ್ತಿರುವ ಬಯಲುಸೀಮೆಯ ಜನರಿಗೆ ಗಿಡಗಳನ್ನು ನೆಟ್ಟು ಬೆಳೆಸುವುದು ಪರಿಹಾರವಾಗಲಿದೆ ಎಂದು ಅವರು ತಿಳಿಸಿದರು.
ಅರಣ್ಯ ನಾಶದಿಂದ ಮಳೆ ಪ್ರಮಾಣ ಕಡಿಮೆಯಾಗಿದ್ದು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಅರಣ್ಯವನ್ನು ಕಾಪಾಡುವ ಮೂಲಕ ಮುಂದಿನ ಪೀಳಿಗೆ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆಧ್ಯ ಕರ್ತವ್ಯ ಆಗಬೇಕು ಎಂದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಸುರೇಶ್‌ಬಾಬು ಮಾತನಾಡಿ, ಮನೆಗೊಂದು ಮರ, ಊರಿಗೊಂದು ತೋಪು, ತಾಲ್ಲೂಕಿಗೊಂದು ಕಿರುಅರಣ್ಯ, ಜಿಲ್ಲೆಗೊಂದು ಕಾಡು ಎನ್ನುವುದು ಹಸಿರು ಕರ್ನಾಟಕ ಆಂದೋಲನದ ಧ್ಯೇಯವಾಗಿದೆ. ಬೌಗೋಳಿಕ ಪ್ರದೇಶದ ಶೇ ೩೨ ರಷ್ಟು ಅರಣ್ಯ ಇರಬೇಕಿದ್ದು ಇದೀಗ ಶೇ ೨೩ ರಷ್ಟು ಮಾತ್ರ ಇದೆ. ಇದನ್ನು ಹೆಚ್ಚಿಸಲು ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕು. ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಪರಿಸರ ಸಂಘಟನೆಗಳನ್ನು ಸಕ್ರಿಯವಾಗಿ ಈ ಆಂದೋಲನದಲ್ಲಿ ಬಳಸಿಕೊಳ್ಳುವ ಮೂಲಕ ನಾಗರಿಕರಲ್ಲಿ ಪರಿಸರ ಜಾಗೃತಿ ಮೂಡಿಸಲಾಗುವುದು ಎಂದರು.
ವಲಯ ಅರಣ್ಯಾಧಿಕಾರಿ ವಿ.ಮುನಿಯಪ್ಪ ಮಾತನಾಡಿ ರೈತರು ತಮ್ಮ ಕೃಷಿ ಭೂಮಿಯಲ್ಲಿ ಅರಣ್ಯೀಕರಣ ಕಾಮಗಾರಿ ಮಾಡಿ ಸಸಿಗಳನ್ನು ನಾಟಿ ಮಾಡಲು ಇಲಾಖೆ ವಿವಿಧ ಯೋಜನೆಗಳನ್ನು ರೂಪಿಸಿದ್ದು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ತಹಶೀಲ್ದಾರ್ ಅಜಿತ್‌ಕುಮಾರ್‌ರೈ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಮತಾ ಮಂಜುನಾಥ್, ಸದಸ್ಯ ಮುರಳಿ, ಮಾಜಿ ಸದಸ್ಯರಾದ ರಾಮಕೃಷ್ಣಪ್ಪ, ನರಸಿಂಹಪ್ಪ, ಎಂ.ರಘು, ಜಯಚಂದ್ರ, ನರಸಿಂಹಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು ಹಾಜರಿದ್ದರು.
- Advertisement -
- Advertisement -
- Advertisement -