Home News ಅಕ್ಷರಶಃ ನರಕವನ್ನು ಅನುಭವಿಸಿಸುತ್ತಿದ್ದಾರೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು

ಅಕ್ಷರಶಃ ನರಕವನ್ನು ಅನುಭವಿಸಿಸುತ್ತಿದ್ದಾರೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು

0
Asha Workers Anganwadi Sidlaghatta Covid Warriors Difficulties

ಈಗಿನ ಕೊರೊನಾ ಎರಡನೇ ಅಲೆಯ ಭೀಕರತೆಯಲ್ಲಿ ತಾಯಂದಿರ ಹಾಗೆ ಸೇವೆ ಸಲ್ಲಿಸುತ್ತಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಅಶ್ವಿನಿ ದೇವತೆಗಳು ಎನ್ನಬೇಕು. ಬಹುತೇಕ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಚಿಕ್ಕ ವಯಸ್ಸಿನವರಾಗಿದ್ದು, ತಮ್ಮ ಮನೆ ಮಕ್ಕಳನ್ನು ಬಿಟ್ಟು ಈ ಮಹಾಮಾರಿ ಕೊರೊನಾ ಸೋಂಕನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರು ಸರ್ವೆ ಕೆಲಸ ನಿರ್ವಹಿಸಿದರೆ, ಆಶಾಕಾರ್ಯಕರ್ತೆಯರು ಸೋಂಕಿತರ ಔಷಧೋಪಚಾರ, ತುರ್ತು ಸಮಯದಲ್ಲಿ ತಾಲ್ಲೂಕು ಅಥವಾ ಜಿಲ್ಲಾ ಕೇಂದ್ರಕ್ಕೆ ಕರೆದೊಯ್ಯುವ ಕೆಲಸ  ನಿರ್ವಹಿಸುತ್ತಾರೆ. ಇವರಿಗೆ ಪಿಪಿಯಿ ಕಿಟ್ ಇರಲಿ, ಚೆನ್ನಾಗಿರುವ ಮಾಸ್ಕ್ ಸಹ ನೀಡಿರುವುದಿಲ್ಲ. ಯಾವುದೋ ಸಾಧಾರಣ ಮಾಸ್ಕ್ ಹಾಕಿಕೊಂಡು ಕೆಲಸ ನಿರ್ವಹಿಸಬೇಕಿದೆ. ಎನ್ 95 ಮಾಸ್ಕ್ ಇವರಿಗೆ ಗಗನ ಕುಸುಮವಾಗಿದೆ.

 “ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ನಿಗದಿತ ಸಂಬಳವಿಲ್ಲ, ಗೌರವಧನ ಅಂತ ನೀಡುತ್ತಾರೆ, ಈಗಿನ ದಿನಮಾನದಲ್ಲಿ ಅದು ಸಾಲುವುದಿಲ್ಲ. ಅದರ ಬಗ್ಗೆ ಇವರಿಗೂ ಸರ್ಕಾರಕ್ಕೂ ಹೋರಾಟ ನಡೆದೇ ಇದೆ. ಫಲಿತಾಂಶ ಶೂನ್ಯ. ಆದರೂ ನಾವುಗಳು ಜನ ಸೇವೆಯಿಂದ ಹಿಂದೆ ಸರಿದಿಲ್ಲ. ಅದೂ ಕೊರೊನ ಪರೀಕ್ಷೆ ಮಾಡುವುದರಿಂದ ಹಿಡಿದು ಪರೀಕ್ಷೆಗೆ ಬಂದವರ ವಿಳಾಸ, ದೂರವಾಣಿ ಸಂಖ್ಯೆ ಬರೆದು ಅದಕ್ಕೊಂದು ಕ್ರಮ ಸಂಖ್ಯೆ ನೀಡಿ, ಪರೀಕ್ಷೆ ಮಾಡಿ, ಜತನದಿಂದ ಅದೇ ಟೆಸ್ಟ್ ಸ್ಯಾಂಪಲ್ ಮೇಲೆ ಅದೇ ಕ್ರಮ ಸಂಖ್ಯೆ ಬರೆದು, ಲ್ಯಾಬ್‌ಗೆ ಕಳುಹಿಸುತ್ತೇವೆ. ಪರೀಕ್ಷೆಗೆ ಬಂದ ಕೆಲವರು ನಮ್ಮ ಮೇಲೆ ವಾಗ್ದಾಳಿ ಮಾಡುತ್ತಾರೆ. ಕೀಳಾಗಿ ಏಕವಚನದಲ್ಲಿ ಮಾತನಾಡುವುದಲ್ಲದೆ,  ಸಾಮಾನ್ಯ ಅಂತರ ಕೂಡಾ ಕಾಯ್ದುಕೊಳ್ಳದೇ ಸಹಕರಿಸದೇ ಹೋಗುತ್ತಾರೆ. ನಮ್ಮಲ್ಲಿ ಹಲವರಿಗೆ ಕೊರೊನಾ ಸೋಂಕು ತಗುಲಿದೆ” ಎಂದು ತಮ್ಮ ಕಷ್ಟಗಳನ್ನು ಹೆಸರು ಹೇಳಲು ಇಚ್ಛಿಸದ ಆಶಾ ಕಾರ್ಯಕರ್ತೆಯರು ವಿವರಿಸಿದರು.

“ಮಧ್ಯಾಹ್ನಕ್ಕೆ ಎಲ್ಲಾ ಸ್ಯಾಂಪಲ್‌ಗಳನ್ನ ಪ್ರಯೋಗಾಲಯಕ್ಕೆ ಕಳುಹಿಸಿದ ನಂತರ ತಮ್ಮ ಕೈ ಚೀಲಗಳನ್ನ ಹೆಗಲಿಗೇರಿಸಿ ಪಾಸಿಟಿವ್ ಬಂದವರ ಮನೆಗೆ ಹೋಗಿ ಅವರು ಮನೆಯೊಳಗೇ ಇದ್ದಾರಾ? ಮಾಸ್ಕ್ ಹಾಕಿದ್ದಾರಾ? ಎಂಬೆಲ್ಲಾ ವಿವರಗಳನ್ನ ಕೂಡಲೇ ಪೋಟೋ ತೆಗೆದು ತಮ್ಮ ಮೇಲಾಧಿಕಾರಿಗಳಿಗೆ ರವಾನಿಸ ಬೇಕು. ಇದರ ಮಧ್ಯೆ ರೋಗಿಗಳ ಮನೆಯ ಬಳಿ ಹೋದಾಗ ನಮ್ಮ ಸಲಹೆಗಳಿಗೆ ಕೆಲವು ರೋಗಿಗಳು ಉಡಾಫೆಯಿಂದ ಮಾತಾಡಿ ಕಳುಹಿಸುತ್ತಾರೆ. ಹೇಳ ಬೇಕೆಂದರೆ ನಮ್ಮನ್ನು ಕಂಡರೆ ನಮ್ಮ ಜನಕ್ಕೇನೋ ತಾತ್ಸಾರ. ಆದರೆ ರೋಗಿಗಳ ಪ್ರಾಣ ಕಾಪಾಡುವಲ್ಲಿ ನಮ್ಮದೇ ಪ್ರಮುಖ ಪಾತ್ರ. ಹಾಗಂತ ನಮಗೆ ವಿಶೇಷವಾಗಿ ಯಾವ ಭತ್ಯೆಯೂ ನೀಡುವುದಿಲ್ಲ., ಕರೋನಾ ರೋಗಿಗಳ ನಡುವೆ ಓಡಾಡುವ ನಾವು ‌ ಸೋಂಕಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು. ಈಗಾಗಲೇ‌ ಹಲವಾರು ಮಂದಿ ಸೋಂಕಿಗೆ ಒಳಗಾಗಿ ತೊಂದರೆ ಪಡುತ್ತಿದ್ದಾರೆ” ಎಂದು ಅವರು ಹೇಳಿದರು.

 “ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಅರ್ಧ ಲೀಟರ್‍ ನೀರಿನ ಬಾಟಲಿಯನ್ನು ತಮ್ಮ ವ್ಯಾನಿಟಿ ಬ್ಯಾಗಿನಲ್ಲಿರಿಸಿಕೊಂಡು ಹಳ್ಳಿಯಿಂದ ಹಳ್ಳಿಗೆ ನಡೆದು ಹೋಗಬೇಕಾದ ಪರಿಸ್ಥಿತಿಯಿದೆ. ಈಗ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಅಕಸ್ಮಾತ್ ದ್ವಿಚಕ್ರ ವಾಹನ ಬಂದರೂ, ಇವರು ಸೋಂಕಿತರ ಮನೆಗಳಿಗೆ ಹೋಗುತ್ತಾರೆಂಬ ಕಾರಣಕ್ಕೆ ಯಾರೂ ಡ್ರಾಪ್ ಕೊಡುವುದಿಲ್ಲ. ಪಿಂಕ್ ಸೀರೆಯವರನ್ನು ಹಳ್ಳಿಗಳಲ್ಲಿ ಕೀಳಾಗಿ ನೋಡುವ ಮನೋಭಾವ ಹೋಗಬೇಕು. ಯಾವ ಜನ್ಮದಲ್ಲಿ ನಮ್ಮ ತಾಯಂದಿರೋ ಅವರು ಈಗ ನಮ್ಮ ಸೇವೆಗೆ ನಿಂತಿದ್ದಾರೆ. ಒಂದೆಡೆ ಹಿರಿಯ ಅಧಿಕಾರಿಗಳು ಲಸಿಕೆ ಹಾಕಿಸಲು ಇವರಿಗೆ ಟಾರ್ಗೆಟ್ ನೀಡಿದರೆ, ಮತ್ತೊಂದೆಡೆ ಲಸಿಕೆ ಖಾಲಿಯಾದರೆ ಜನರ ಹಿಡಿ ಶಾಪಕ್ಕೆ ಈ ಪಾಪದವರು ಗುರಿಯಾಗುತ್ತಾರೆ.  ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸ್ಕ್ ಮತ್ತು ಗ್ಲೌಸ್ ಕೊಡಿಸಬೇಕು. ಎಷ್ಟು ಕಡೆ ಉತ್ತಮ ಗುಣಮಟ್ಟದ್ದು ಕೊಡುತ್ತಾರೆ. ಉಪಯೋಗಿಸಿ ಬಿಸಾಡಬೇಕಾದ ಮಾಸ್ಕ್ ನಿಂದ ಇವರಿಗೆ ಏನು ರಕ್ಷಣೆಯಿದೆ. ನಿಜಕ್ಕೂ ಇವರನ್ನು ಕಂಡರೆ ಮನಸ್ಸು ಕಲಕುತ್ತದೆ” ಎನ್ನುತ್ತಾರೆ ಮೇಲೂರು ಗ್ರಾಮ ಪಂಚಾಯಿತಿ ಸದಸ್ಯ ಎಂ.ಕೆ. ರವಿಪ್ರಸಾದ್.

– ಡಿ ಜಿ ಮಲ್ಲಿಕಾರ್ಜುನ

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version