
ಜಂಗಮಕೋಟೆ ಕ್ರಾಸ್ ನಲ್ಲಿ ನಾಲ್ಕು ಖಾಸಗಿ ಕ್ಲಿನಿಕ್ ಗಳು, ಮೂರು ಔಷಧಿ ಅಂಗಡಿಗಳು ಹಾಗೂ ಒಂದು ಲ್ಯಾಬ್ ಗಳಿಗೆ ಭೇಟಿ ನೀಡಿದ್ದು, ಅವರಿಗೆ ಎಚ್ಚರಿಕೆಯನ್ನು ಕೊಟ್ಟು ಬಂದಿದ್ದೇವೆ. ನಿಮಗೆ ಆಯುರ್ವೇದದ ಪರವಾನಗಿ ಇದ್ದರೆ ಆ ಚಿಕಿತ್ಸೆ ಮಾತ್ರ ಕೊಡಬೇಕು ಎಂದು ಖಾಸಗಿ ಕ್ಲಿನಿಕ್ ಗಳವರಿಗೆ ಸೂಚಿಸಿದ್ದೇವೆ. ಯಾರೇ ಆಗಲೀ ನಿಯಮ ಮೀರಿದಲ್ಲಿ ಕ್ರಮ ಕೈಗೊಳ್ಳಲಾಗುವುದು. ಔಷಧಿ ಅಂಗಡಿಯವರು ವೈದ್ಯರ ಚೀಟಿಯಿಲ್ಲದೆ ಔಷಧಿಗಳನ್ನು ಮಾರುವಂತಿಲ್ಲ. ಕೆಲವರು ತಾವೇ ಚಿಕಿತ್ಸೆ ಕೊಡುತ್ತಿರುವ ಮಾಹಿತಿ ಬಂದಿದೆ. ಅಂತಹವರ ಅಂಗಡಿಗಳನ್ನು ಮುಚ್ಚಿಸುತ್ತೇವೆ ಎಂದು ತಹಶೀಲ್ದಾರ್ ಬಿ.ಎಸ್.ರಾಜೀವ್ ಹೇಳಿದರು.
ತಾಲ್ಲೂಕಿನ ಜಂಗಮಕೋಟೆ ಕ್ರಾಸ್ ನಲ್ಲಿ ನಿಯಮಗಳನ್ನು ಉಲ್ಲಂಘಿಸಿ ರೋಗಿಗಳಿಗೆ ಡ್ರಿಪ್ ಹಾಕುವ ಮೂಲಕ ಚಿಕಿತ್ಸೆ ನೀಡುತ್ತಿದ್ದ ಔಷಧಿ ಅಂಗಡಿಯ ಮಾಲೀಕನ ಮೇಲೆ ದೂರು ದಾಖಲಿಸಿ, ಅಂಗಡಿಯನ್ನು ಸೀಜ್ ಮಾಡಿರುವುದಾಗಿ ಅವರು ತಿಳಿಸಿದರು.
ಮೇಲೂರು ಸರ್ಕಲ್ ಕಂಬದಹಳ್ಳಿ ರಸ್ತೆಯಲ್ಲಿ ಒಬ್ಬ ವಂಶಪಾರಂಪರಿಕ ಚಿಕಿತ್ಸಕ ಎಂದು ಹೇಳಿಕೊಂಡು ಇಂಜಕ್ಷನ್ ಹಾಗೂ ಡ್ರಿಪ್ ಹಾಕುತ್ತಾ ಚಿಕಿತ್ಸೆ ನೀಡುತ್ತಿದ್ದ. ಅವನಿಗೆ ಎಚ್ಚರಿಕೆ ನೀಡಿದ್ದು, ಶುಕ್ರವಾರದೊಳಗೆ ಪರವಾನಗಿ ಪತ್ರ ತರದಿದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದೆ. ದಿಬ್ಬೂರಹಳ್ಳಿ ರಸ್ತೆ, ದಿಬ್ಬೂರಹಳ್ಳಿ ಮುಂತಾದೆಡೆ ಪರವಾನಗಿ ಇಲ್ಲದೆ ಹಾಗೂ ನಿಯಮಬಾಹಿರವಾಗಿ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಪೊಲೀಸರೊಂದಿಗೆ ಹೋಗಿ ಮುಚ್ಚಿಸುವುದಾಗಿ ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ ಮೂರ್ತಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಂಬಿಕಾ. ತಾಲ್ಲೂಕು ಆರೋಗ್ಯ ನಿರೀಕ್ಷಕ ಎಂ.ಎಸ್. ದೇವರಾಜ್. ತಾಲ್ಲೂಕು ಆಡಳಿತ ಸಿಬ್ಬಂದಿ. ಪೊಲೀಸ್ ಸಿಬ್ಬಂದಿ ಹಾಜರಿದ್ದರು.