
Sidlaghatta : ಶಿಕ್ಷಕರ ದಿನಚರಣೆ ಅಂಗವಾಗಿ ಕೊಡುವ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ತಾಲ್ಲೂಕಿನ ಮೂವರು ಶಿಕ್ಷಕರು ಭಾಜನರಾಗಿದ್ದಾರೆ.
ಕಿರಿಯ ಪ್ರಥಮಿಕ ಶಾಲಾ ವಿಭಾಗದಿಂದ ಆಮೂರತಿಮ್ಮನಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯ ನಾಗರತ್ನಮ್ಮ, ಹಿರಿಯ ಪ್ರಥಮಿಕ ವಿಭಾಗದಿಂದ ಸುಗಟೂರು ಸರ್ಕಾರಿ ಶಾಲೆಯ ಶಿಕ್ಷಕಿ ಎಚ್.ತಾಜೂನ್, ಪ್ರೌಢಶಾಲಾ ವಿಭಾಗದಿಂದ ಮುತ್ತೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಕೆ.ಬೃಂದ ಆಯ್ಕೆಯಾಗಿದ್ದಾರೆ.
ಶಿಕ್ಷಕಿ ನಾಗರತ್ನಮ್ಮ ಅವರು ಸುಮರು 6 ವರ್ಷಗಳ ಕಾಲ ತಿಮ್ಮನಾಯ್ಕನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು ಕಳೆದ 23 ವರ್ಷಗಳಿಂದ ಆಮೂರತಿಮ್ಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಲಿಕಲಿ ಮಕ್ಕಳಿಗೆ ಚಟುವಟಿಕೆ ಆಧಾರಿತ ಕಲಿಕೆಗೆ ಒತ್ತು ನೀಡಿ ದಾಖಲಾತಿ ಹೆಚ್ಚಳ, ದಾನಿಗಳಿಂದ ಶಾಲೆಗೆ ಬೇಕಾದ ಟಿ.ವಿ, ಪೀಠೋಪಕರಣಗಳನ್ನು ಕಲ್ಪಿಸಿಕೊಡುವಲ್ಲಿ ಶ್ರಮಿಸಿದ್ದಾರೆ.
ಶಿಕ್ಷಕಿ ಎಚ್.ತಾಜೂನ್ ಅವರು ಆರು ವರ್ಷಗಳ ಕಾಲ ಪೆರೇಸಂದ್ರದ ಶಾಲೆಯಲ್ಲಿ ಕಾರ್ಯನಿರ್ವಹಿಸಿದ್ದು, ಕಳೆದ 20 ವರ್ಷಗಳಿಂದ ಸುಗಟೂರು ಸರ್ಕರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ 1 ರಿಂದ 5 ನೇ ತರಗತಿ ಮಕ್ಕಳಿಗೆ ನಲಿ-ಕಲಿ ವಿಧಾನದಲ್ಲಿ ಬೋಧಿಸುವಲ್ಲಿ ತೊಡಗಿಸಿಕೊಂಡಿದ್ದಾರೆ.
ಶಿಕ್ಷಕಿ ಕೆ.ಬೃಂದ ಅವರು ಕಳೆದ 15 ವರ್ಷಗಳಿಂದ ಮುತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕಿಯಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎನ್.ಟಿ.ಎಸ್.ಈ ಮತ್ತು ಎನ್.ಎಂ.ಎಂ.ಎಸ್ ಪರೀಕ್ಷಾ ತರಬೇತಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಇ-ಕಂಟೆಂಟ್ ತಯಾರಿ ಸೇರಿದಂತೆ ವಿವಿಧ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಗಿ ಭಾಗವಹಿಸಿದ್ದಾರೆ. ವಿಜ್ಞಾನಸಂಘದ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಮನೋಭಾವನೆಯನ್ನು ವೃದ್ಧಿಸುತ್ತಿದ್ದು, ದಾನಿಗಳಿಂದ ಕಲಿಕೆಗಾಗಿ ಬೆಳಕು ಕಾರ್ಯಕ್ರಮದಡಿ ವಿದ್ಯುತ್‌ದೀಪಗಳನ್ನು ಕೊಡಿಸಿದ್ದಾರೆ. ಗ್ರಾಮಾಂತರ ಟ್ರಸ್ಟ್ ಸಹಕಾರದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿವರ್ಷವೂ 1.5 ಲಕ್ಷ ರೂಗೂ ಹೆಚ್ಚು ವಿದ್ಯಾರ್ಥಿವೇತನ ಕೊಡಿಸುತ್ತಿದ್ದಾರೆ. ಎಸ್.ಎಸ್.ಎಲ್.ಸಿ ಪ್ರಶ್ನೆಕೋಠಿ ಮತ್ತು ಪಾಸಿಂಗ್ ಪ್ಯಾಕೇಜ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.