
Sugaturu, Sidlahgatta : ಗ್ರಹಣ ಎಂಬುದು ಆಗಸದಲ್ಲಿ ಘಟಿಸುವ ಒಂದು ಕೌತುಕ ವಿಸ್ಮಯ. ಚಾರಿತ್ರಿಕವಾಗಿ ಗ್ರಹಣದ ದಿನದಂದು ಅಥವಾ ಮಾರನೆಯ ದಿನದಂದು ದೇವಸ್ಥಾನಗಳಿಗೆ ದಾನ ದತ್ತಿ ನೀಡಿರುವ ವಿಚಾರ ತಾಲ್ಲೂಕಿನ ಕೆಲವು ಶಾಸನಗಳಿಂದ ತಿಳಿದುಬರುತ್ತದೆ.
ತಾಲ್ಲೂಕಿನ ಸುಗುಟೂರಿನ ಉತ್ತರದಿಕ್ಕಿನ ಹೊಲವೊಂದರಲ್ಲಿ ಸಿಕ್ಕಿರುವ ಶಾಸನದಲ್ಲಿ ಚಂದ್ರಗ್ರಹಣದಂದು ದಾನ ನೀಡಿರುವ ಬಗ್ಗೆ ಮಾಹಿತಿ ಇದೆ. 1522ರ ಸೆಪ್ಟೆಂಬರ್ 5ರಂದು ಘಟಿಸಿದ ಚಂದ್ರಗ್ರಹಣದಂದು ಶ್ರೀಕೃಷ್ಣದೇವರಾಯರಿಗೆ ಒಳ್ಳೆಯದಾಗಲಿ ಎಂದು ನಲ್ಲೂರು ಸೀಮೆಗೆ ಸಲ್ಲುವ ಮಂಡಿಬೆಲೆ ಸ್ಥಳದ ವೊಡಹಳ್ಳಿ ಗ್ರಾಮವನ್ನು ಸುಗುಟೂರಿನ ಚನ್ನಕೇಶವ ದೇವರ ದೀಪಾರಾದನೆ, ಅಂಗಭೋಗ, ರಂಗಭೋಗ, ತಿರುನಾಳ್ ಸೇವೆ ಮುಂತಾದ ಪೂಜಾಕೈಂಕರ್ಯಗಳಿಗೆ ಹೊಸಬನನಾಯಕ ಮತ್ತು ಕೃಷ್ಣನಾಯಕ ಎಂಬುವವರು ದಾನ ನೀಡಿರುವ ವಿವರಗಳು ಈ ಶಾಸನದಿಂದ ತಿಳಿದುಬರುತ್ತದೆ.
“ಗ್ರಹಣದ ಕುರಿತಾಗಿ ನಮ್ಮ ಹಿರಿಯರಿಗೆ ಒಳ್ಳೆಯ ಅಭಿಪ್ರಾಯಗಳಿದ್ದವು. ಗ್ರಹಣದ ದಿನದಂದು ಒಳ್ಳೆಯ ಕೆಲಸ ಮಾಡಿದರೆ ಅದರ ಪುಣ್ಯ ಹೆಚ್ಚು ಎಂಬ ನಂಬಿಕೆಯಿಂದ ದಾನ, ಧರ್ಮ, ದೇವಸ್ಥಾನಗಳಿಗೆ ದತ್ತಿ ನೀಡುವುದು, ಕೆರೆ ಕಟ್ಟಿಸುವ ಸಾಮಾಜಿಕ ಕಾರ್ಯಗಲನ್ನು ನಡೆಸುತ್ತಿದ್ದರು ಎಂಬ ವಿಚಾರಗಳು ನಮಗೆ ಶಾಸನಗಳಿಂದ ತಿಳಿದುಬರುತ್ತದೆ” ಎಂದು ಶಾಸನತಜ್ಞ ಕೆ.ಧನಪಾಲ್ ತಿಳಿಸಿದರು
ಸೂರ್ಯ ಗ್ರಹಣದ ದಿನ ನೀಡಿರುವ ದಾನ :
ತಾಲ್ಲೂಕಿನ ಸೊಣ್ಣೇನಹಳ್ಳಿಯಲ್ಲಿ ಶಿಡ್ಲಘಟ್ಟ ನಗರದ ನಿರ್ಮಾತೃ ಹಲಸೂರಮ್ಮನ ಮಗ ಶಿವನೇಗೌಡ ಹೆಸರಿರುವ ಶಾಸನವನ್ನು ಕ್ರಿ.ಶ. 1590 ರ ಜುಲೈ ತಿಂಗಳ 21 ನೇ ತಾರೀಖಿನ ಮಂಗಳವಾರ ಸೂರ್ಯ ಗ್ರಹಣದ ದಿನ ಬರೆಯಲಾಗಿದೆ. ಗ್ರಹಣದ ದಿನ ದಾನ ಕೊಟ್ಟರೆ ಎಲ್ಲರಿಗೂ ಒಳ್ಳೆಯದಾಗುತ್ತದೆಂಬ ನಂಬಿಕೆ ನಮ್ಮ ಹಿರಿಯರದ್ದು. ಹಾಗಾಗಿ ಜನಾನುರಾಗಿ ಆಡಳಿತಗಾರ ಶಿವನೇಗೌಡರ ನೆನಪಿನಲ್ಲಿ ಒಂದು ಕೆರೆಯನ್ನು ಕಟ್ಟಿಸಿ ದಾನ ಮಾಡಿರುವ ಬಗ್ಗೆ ಶಾಸನದಲ್ಲಿ ಬರೆದಿರುವರು.
ಆಗ ವಿಜಯನಗರ ಸಾಮ್ರಾಜ್ಯವನ್ನು ವೆಂಕಟಪತಿರಾಯರು ಆಳುತ್ತಿದ್ದರು. ಅವರ ಸಾಮಂತರಾಗಿ ಸುಗುಟೂರು ಪ್ರಾಂತ್ಯವನ್ನು ಇಮ್ಮಡಿ ತಮ್ಮಪ್ಪಗೌಡರು ಆಳ್ವಿಕೆ ನಡೆಸುವಾಗ, ಶಿಡ್ಲಘಟ್ಟ ಪ್ರಾಂತ್ಯವನ್ನು ಆಳಿ, ಅಪಾರ ಜನಸೇವೆ ಮಾಡಿ, ಉತ್ತಮ ಆಡಳಿತ ನಡೆಸಿ ದೈವಸನ್ನಿಧಿಗೆ ಸೇರಿರುವ ಶಿವನೇಗೌಡರ ನೆನಪಿನಲ್ಲಿ ಅವರ ಅನುಯಾಯಿಗಳಾದ ನಾಣಪ್ಪಗೌಡರ ಮಗ ಶಿಲೇಗೌಡರು, ಶಿವಸಮುದ್ರ ಎಂಬ ಕೆರೆಯನ್ನು ಜನೋಪಕಾರಕ್ಕಾಗಿ ಕಟ್ಟಿಸಿ ದಾನ ಮಾಡಿರುವ ವಿಷಯವನ್ನು ಈ ಶಾಸನದಲ್ಲಿ ಕೆತ್ತಿರುವರು.
ಚಂದ್ರಗ್ರಹಣದ ಬಗ್ಗೆ ಟಿವಿ ಜ್ಯೋತಿಷಿಗಳು ಜನರನ್ನು ಭಯಭೀತರನ್ನಾಗಿಸುತ್ತಿರುವ ಸಮಯದಲ್ಲಿ ಚರಿತ್ರೆಗೆ ಸಂಬಂಧಿಸಿದ ವಿಷಯವನ್ನು ಹೇಳಬೇಕಿದೆ. ನಾನು ಗಮನಿಸಿದಂತೆ ನಮ್ಮ ನಂದಿ ಸೀಮೆಯ ಹಲವಾರು ಶಿಲಾಶಾಸನಗಳನ್ನು ರಾಜಮಹಾರಾಜರು ಹಾಕಿಸಿರುವುದೇ ಚಂದ್ರಗ್ರಹಣದ ಸಮಯದಲ್ಲಿ. ದಾನ ಧರ್ಮಗಳಿಗೆ ಅದೊಂದು ಪ್ರಶಸ್ತ ಸಮಯ ಮತ್ತು ದಾನದ ಫಲ ದಕ್ಕಲು ಅದು ಸೂಕ್ತ ಸಮಯ ಎಂಬುದು ಇದರಿಂದ ತಿಳಿದುಬರುತ್ತದೆ
-ಡಿ.ಎನ್.ಸುದರ್ಶನರೆಡ್ಡಿ, ಶಾಸನತಜ್ಞ