Home News GST ಸ್ಲ್ಯಾಬ್ ಕಡಿತ – ಜನಸಾಮಾನ್ಯರಿಗೆ ಅನುಕೂಲ: ಸಂಸದ ಎಂ. ಮಲ್ಲೇಶ್ ಬಾಬು

GST ಸ್ಲ್ಯಾಬ್ ಕಡಿತ – ಜನಸಾಮಾನ್ಯರಿಗೆ ಅನುಕೂಲ: ಸಂಸದ ಎಂ. ಮಲ್ಲೇಶ್ ಬಾಬು

0
GST Cut Beneficial to common people-mp mallesh babu

Sidlaghatta : ಶಿಡ್ಲಘಟ್ಟದ ಶ್ರೀಬಾಲಾಜಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೋಲಾರ ಕ್ಷೇತ್ರದ ಸಂಸದ ಎಂ. ಮಲ್ಲೇಶ್ ಬಾಬು ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲಾ ಜಿ.ಎಸ್.ಟಿ ಸ್ಲ್ಯಾಬ್‌ಗಳನ್ನು ರದ್ದು ಮಾಡಿ ಕೇವಲ 5% ಮತ್ತು 18% ಸ್ಲ್ಯಾಬ್‌ಗಳನ್ನು ಮಾತ್ರ ಉಳಿಸುವ ನಿರ್ಧಾರ ಜನಸಾಮಾನ್ಯರಿಗೆ ದೊಡ್ಡ ಮಟ್ಟದಲ್ಲಿ ಅನುಕೂಲಕರ ಎಂದು ಹೇಳಿದರು.

ಈ ನಿರ್ಧಾರವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿ, ಹಣಕಾಸು ಮಂತ್ರಿಗಳು ಹಾಗೂ ಆರ್ಥಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಕೈಗೊಂಡಿದ್ದಾರೆ. ಇದರಿಂದ ದಿನನಿತ್ಯದ ಆಹಾರ ಪದಾರ್ಥಗಳು, ಗಂಭೀರ ರೋಗಗಳ ಔಷಧಿಗಳು ಹಾಗೂ ಜೀವ ವಿಮೆ ಮೇಲಿನ ತೆರಿಗೆ ಇಳಿಯುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಪರಿಹಾರ ಸಿಗಲಿದೆ ಎಂದು ಸಂಸದರು ಅಭಿಪ್ರಾಯಪಟ್ಟರು.

ಕೋಲಾರ-ಚಿಕ್ಕಬಳ್ಳಾಪುರ ಉದ್ಯೋಗಾವಕಾಶಗಳಿಗೆ ಭರವಸೆ
ಬಿಜಿಎಂಎಲ್‌ನ 5 ಸಾವಿರ ಎಕರೆಯನ್ನು ಲ್ಯಾಂಡ್ ಬ್ಯಾಂಕ್ ಮಾಡಿ, ಕಾರ್ಖಾನೆಗಳನ್ನು ಆರಂಭಿಸಲು ಆಸಕ್ತರಿಗೆ ಕಡಿಮೆ ದರದಲ್ಲಿ ಜಮೀನು ಮತ್ತು ಮೂಲಸೌಕರ್ಯ ಒದಗಿಸಲಾಗುವುದು. ಜೊತೆಗೆ 200-300 ಎಕರೆಯಲ್ಲಿ ಟೌನ್‌ಶಿಪ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಸಂಸದರು ತಿಳಿಸಿದರು. ಎನ್‌.ಎಂ.ಡಿ.ಸಿ.ಎಲ್ ಮತ್ತು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಅಧೀನಕ್ಕೆ ಬರುವುದರಿಂದ, ಕೈಗಾರಿಕಾ ಬೆಳವಣಿಗೆಗೆ ಇದು ಸಹಕಾರಿಯಾಗಲಿದೆ ಎಂದರು.

ಕೃಷ್ಣಾ ನದಿ ನೀರಾವರಿ ಯೋಜನೆಗೆ ತುರ್ತು ಕ್ರಮಗಳು

ಕೃಷ್ಣಾ ನದಿ ನೀರನ್ನು ಮದನಪಳ್ಳಿಯಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದ್ದು, ಜೆಜೆಎಂ ಹಾಗೂ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್‌ಗಳ ತಂಡ ಸ್ಥಳ ಪರಿಶೀಲನೆ ನಡೆಸಲಿದೆ ಎಂದು ಹೇಳಿದರು.

ರಾಜ್ಯಸಭೆ ಸದಸ್ಯ ಎಚ್.ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿದ ಬಳಿಕ ಕೇಂದ್ರ ಜಲ ಸಂಪನ್ಮೂಲ ಸಚಿವರೂ ಸಹಕಾರದ ಭರವಸೆ ನೀಡಿದ್ದಾರೆ. ಈಗಾಗಲೇ ಮದನಪಳ್ಳಿಗೆ ಕೃಷ್ಣಾ ನದಿ ನೀರು ಹರಿದು ಬಂದಿರುವುದರಿಂದ, ಮಳೆಗಾಲದಲ್ಲಿ ಹೆಚ್ಚುವರಿ ನೀರನ್ನು ಪಂಪ್ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಂಸದರು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ತಾದೂರು ರಘು, ಮೇಲೂರು ಉಮೇಶ್ ಹಾಗೂ ಹಲವರು ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version