
Chikkadasarahalli, Sidlaghatta : ಜೀವನದ ಮೌಲ್ಯಗಳನ್ನು ಕಲಿಯದ ಹೊರತು ಶಿಕ್ಷಣ ಪರಿಪೂರ್ಣವಾಗುವುದಿಲ್ಲ ಎಂದು ಗ್ರಾಮ ಪಂಚಾಯಿತಿ ಪಿಡಿಓ ಶೈಲಾ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಚಿಕ್ಕದಾಸರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳಿಗೆ ಬರೀ ಪುಸ್ತಕದಲ್ಲಿನ ಪಾಠ ಹೇಳಿಕೊಟ್ಟರೆ ಸಾಲದು, ಬದಲಿಗೆ ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಜೀವನದ ಮೌಲ್ಯಗಳನ್ನು ಕಲಿಸಬೇಕು. ತಮ್ಮ ಪೋಷಕರ ಕಷ್ಟ ಸುಖಗಳು ಮಕ್ಕಳಿಗೆ ತಿಳಿಯಬೇಕು. ಹೊರಗಿನ ಜಗತ್ತಿನಲ್ಲಿ ಜೀವನ ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನು ತಿಳಿಸುವ ಉದ್ದೇಶದಿಂದ ಶಾಲೆಯಲ್ಲಿ ಮಕ್ಕಳ ಸಂತೆ ಆಯೋಜಿಸಿದ್ದು ಪುಟಾಣಿ ಮಕ್ಕಳ ಸಂತೆಯಲ್ಲಿ ಭಾಗವಹಿಸಿರುವ ಪೋಷಕರೂ ಸೇರಿದಂತೆ ಶಾಲಾ ಸಿಬ್ಬಂದಿ ಸಂತೆಯಲ್ಲಿರುವ ಎಲ್ಲ ವಸ್ತುಗಳನ್ನು ಖರೀದಿಸುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸಿ ಎಂದರು.
ಸಿ.ಆರ್.ಪಿ ಬಾಬು ಮಾತನಾಡಿ ಮಕ್ಕಳಲ್ಲಿ ವ್ಯಾಪಾರೀ ಮನೋಭಾವ ಬೆಳೆಸುವುದು ಸೇರಿದಂತೆ ವಸ್ತುಗಳನ್ನು ಖರೀದಿಸುವಾಗ ಕಲಿಯಬೇಕಾದ ಮಾಪನಗಳನ್ನು ಪ್ರಾಯೋಗಿಕವಾಗಿ ಮಕ್ಕಳಲ್ಲಿ ಕಲಿಸಲು ಮಕ್ಕಳ ಸಂತೆ ಸಹಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ದೇವರಾಜ್, ಶಾಲೆಯ ಮುಖ್ಯ ಶಿಕ್ಷಕಿ ಸರಸ್ವತಮ್ಮ, ಗ್ರಾ.ಪಂ ಸದಸ್ಯ ಮುನಿರಾಜು, ಸಿಬ್ಬಂದಿ ಹಾಜರಿದ್ದರು.
ಮಕ್ಕಳ ಸಂತೆಯಲ್ಲಿ ನೂರಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಿದ್ದ ಪುಟಾಣಿ ಮಕ್ಕಳು ತಾವು ಹಾಕಿದ್ದ ತರಕಾರಿ, ಹೂವು, ಹಣ್ಣು, ಚುರು ಮುರಿ ಯನ್ನು ಮಾರಲು ಒಬ್ಬರಿಗಿಂತ ಒಬ್ಬರು ಪೈಪೋಟಿಯಂತೆ ಕೂಗುತ್ತಿದ್ದರು. ಕೆಲ ಮಕ್ಕಳಂತೂ ಪಾನಿ ಪೂರಿ, ಮಸಾಲೆ ಪೂರಿ ಮಾರುತ್ತಿದ್ದರು. ಸಂತೆ ನೋಡಲು ಬಂದಿದ್ದ ಪೋಷಕರು ತಮ್ಮ ಮಕ್ಕಳ ಸಂತೆ ವ್ಯಾಪಾರ ಹೇಗಿದೆ ಎನ್ನುವ ನೋಡುವ ಜೊತೆಗೆ ಮಕ್ಕಳು ಹೇಳಿದ ದರ ನೀಡಿ ವಸ್ತುಗಳನ್ನು ಖರೀದಿಸಿ ಸಂತಸಪಟ್ಟರು.