Sidlaghatta, chikkaballapur : ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರ ಗೇಟ್ ಬಳಿ ಇರುವ ಬಿಜಿಎಸ್ ವಿದ್ಯಾಸಂಸ್ಥೆಯಲ್ಲಿ ಶನಿವಾರ ಮಕ್ಕಳ ಸಂತೆ ಆಯೋಜಿಸಲಾಗಿದ್ದು, ಮಕ್ಕಳಲ್ಲಿ ವ್ಯಾಪಾರೀ ಮನೋಭಾವ, ಪರಸ್ಪರ ಸಂವಹನ ಮತ್ತು ಮೌಲ್ಯಾಧಾರಿತ ಜೀವನ ಕೌಶಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಹತ್ವದ್ದಾಗಿದೆ ಎಂದು ಪ್ರಾಂಶುಪಾಲ ಆರ್. ಮಹದೇವ್ ಹೇಳಿದರು.
ಮಕ್ಕಳ ಸಂತೆ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಕೇವಲ ಪಠ್ಯ ಜ್ಞಾನ ನೀಡುವುದರಿಂದ ಸಾಲದು; ಬದಲಿಗೆ ಬದುಕಿನ ನೈಜ ಪರಿಸರದಲ್ಲಿ ಕಲಿಯುವ ಅನೇಕ ಕೌಶಲ್ಯಗಳು ಅಗತ್ಯ. ಮನೆಯ ಆರ್ಥಿಕ ಪರಿಸ್ಥಿತಿ, ಪೋಷಕರ ಪರಿಶ್ರಮ, ಹಣದ ಮೌಲ್ಯ ಮತ್ತು ವಸ್ತುಗಳ ಖರೀದಿ-ಮಾರಾಟದಲ್ಲಿನ ಲೆಕ್ಕಾಚಾರಗಳನ್ನು ಅರ್ಥಮಾಡಿಕೊಳ್ಳಲು ಮಕ್ಕಳ ಸಂತೆ ಉತ್ತಮ ವೇದಿಕೆಯಾಗುತ್ತದೆ ಎಂದು ಹೇಳಿದರು.
ಪೋಷಕರಿಗೂ ಈ ಪ್ರಯತ್ನದಲ್ಲಿ ಪಾತ್ರವಿದೆ ಎಂದು ಅವರು ತಿಳಿಸಿ, “ಮಕ್ಕಳ ಮಳಿಗೆಗಳಿಂದ ವಸ್ತುಗಳನ್ನು ಖರೀದಿಸುವ ಮೂಲಕ ಮಕ್ಕಳ ಉತ್ಸಾಹವನ್ನು ಹೆಚ್ಚಿಸಿ ಪ್ರೋತ್ಸಾಹಿಸಬೇಕು,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರವಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್. ಸುಬ್ಬಾರೆಡ್ಡಿ, ಮುಖಂಡ ಲಕ್ಷ್ಮಣ್ ಸೇರಿದಂತೆ ಪೋಷಕರು ಮತ್ತು ಶಾಲಾ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಮಕ್ಕಳಿಂದಲೇ ‘ಮಿನಿ ಮಾರುಕಟ್ಟೆ’ - ಪೋಷಕರಿಂದ ಭರ್ಜರಿ ಸ್ಪಂದನೆ
ಮಕ್ಕಳ ಸಂತೆಯಲ್ಲಿ ನೂರಕ್ಕೂ ಹೆಚ್ಚು ಮಳಿಗೆಗಳು ಅಲಂಕರಿಸಲ್ಪಟ್ಟಿದ್ದು, ತರಕಾರಿ, ಹೂವು, ಹಣ್ಣು, ಚುರುಮುರು, ಪಾನಿಪೂರಿ, ಮಸಾಲೆಪೂರಿ ಸೇರಿದಂತೆ ಹಲವು ವಸ್ತುಗಳನ್ನು ಮಕ್ಕಳೇ ಮಾರಾಟಕ್ಕೆ ಇಟ್ಟರು.
ಕೆಲವರು ಪಂಚೆ-ಶರ್ಟ್ ಧರಿಸಿ ತರಕಾರಿ ಮಾರಾಟ ಮಾಡುತ್ತಿದ್ದರೆ, ಇನ್ನು ಕೆಲವರು ಪ್ಯಾಂಟ್-ಟಿ ಶರ್ಟ್ ಧರಿಸಿ ಆಹಾರ ವಸ್ತುಗಳ ಮಳಿಗೆಗಳನ್ನು ನಿರ್ವಹಿಸಿದರು. ಹೆಣ್ಣು ಮಕ್ಕಳು ವಿವಿಧ ಹೂವುಗಳು ಮತ್ತು ಅಲಂಕಾರಿಕ ವಸ್ತುಗಳನ್ನು ಮಳಿಗೆಗಳಲ್ಲಿ ಇಟ್ಟು ಪೈಪೋಟಿ ನಡೆಸಿದರು.
ಸಂತೆ ನೋಡಲು ಬಂದ ಪೋಷಕರು ಮಕ್ಕಳ ವಾಣಿಜ್ಯ ಕೌಶಲ್ಯವನ್ನು ಗಮನಿಸಿ, ಮಕ್ಕಳು ಹೇಳಿದ ದರ ನೀಡುವ ಮೂಲಕ ವಸ್ತುಗಳನ್ನು ಖರೀದಿಸಿ ಅವರನ್ನು ಪ್ರೋತ್ಸಾಹಿಸಿದರು.
For Daily Updates WhatsApp ‘HI’ to 7406303366
