Sidlaghatta, Chikkaballapur : “ರಾಜ್ಯದ ಖಜಾನೆ ಖಾಲಿ” ಎಂದು ಬಿಜೆಪಿ ಮಾಡುತ್ತಿದ್ದ ಆರೋಪಗಳಿಗೆ ನಮ್ಮ ಸರ್ಕಾರವೇ ₹1 ಲಕ್ಷ ಕೋಟಿಗೂ ಅಧಿಕ ಅಭಿವೃದ್ಧಿ ಕಾಮಗಾರಿಗಳ ಮೂಲಕ ಉತ್ತರ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರದಲ್ಲಿ ನಡೆದ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ, ಹೆಚ್.ಎನ್.ವ್ಯಾಲಿ ಮೂರನೇ ಹಂತ, ಕುಡಿಯುವ ನೀರು, ಒಳಚರಂಡಿ ಹಾಗೂ ವಿವಿಧ ಇಲಾಖೆಗಳ ಸವಲತ್ತುಗಳ ವಿತರಣೆಯ ಉದ್ಘಾಟನೆ–ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆಯ ನಿರ್ಮಾಣ ಇಡೀ ರಾಜ್ಯದ ರೇಷ್ಮೆ ಕೃಷಿಕರಿಗೆ ನೆರವಾಗಲಿದ್ದು, ಶಿಡ್ಲಘಟ್ಟ ಕ್ಷೇತ್ರದಲ್ಲಿ ಒಂದೇ ದಿನದಲ್ಲಿ ಇಷ್ಟು ಹೆಚ್ಚಿನ ಕಾಮಗಾರಿಗಳಿಗೆ ಚಾಲನೆ ನೀಡುತ್ತಿರುವುದು ಸರ್ಕಾರದ ಅಭಿವೃದ್ಧಿ ಪರ್ವದ ವೇಗಕ್ಕೆ ಸಾಕ್ಷಿ ಎಂದರು. “ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನೂ, ಅಭಿವೃದ್ಧಿ ಕಾಮಗಾರಿಗಳನ್ನೂ ಒಂದೇ ಜಾಗದಲ್ಲಿ ನಿಲ್ಲಿಸಿಲ್ಲ. ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ” ಎಂದು ಹೇಳಿದರು.
ಬಿಜೆಪಿ “ಖಜಾನೆ ಖಾಲಿ” ಎಂದು ಆರೋಪ ಮಾಡುತ್ತಿದ್ದರೂ, ನಾವು ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳ ಅಂಕಿಅಂಶವೇ ಅವರಿಗೆ ಉತ್ತರ. ರಾಜ್ಯದ ಪ್ರತೀ ಕುಟುಂಬಕ್ಕೂ ಪ್ರತೀ ತಿಂಗಳು ಸರ್ಕಾರದ ಸವಲತ್ತು ಹೋಗುತ್ತಿದೆ. ನಮ್ಮ ಸರ್ಕಾರ ಇರುವವರೆಗೂ ಯಾವುದೇ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ ಎಂದು ಭರವಸೆ ನೀಡಿದರು. ಜಾತಿ–ವರ್ಗ ಭೇದ ಹೋಗಿ ಪ್ರತಿಯೊಬ್ಬ ಬಡವನಿಗೂ ಆರ್ಥಿಕ ಶಕ್ತಿ ಬರಬೇಕು ಎಂಬುದು ಸರ್ಕಾರದ ಉದ್ದೇಶ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹಾಗೂ ಕ್ಷೇತ್ರದ ಶಾಸಕರ ಮನವಿಗೆ ಸ್ಪಂದಿಸಿದ ಸಿಎಂ, ಶಿಡ್ಲಘಟ್ಟಕ್ಕೆ ಮಿನಿ ವಿಧಾನಸೌಧ ಸೇರಿದಂತೆ ಇನ್ನಷ್ಟು ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ಕೋಲಾರ–ಚಿಕ್ಕಬಳ್ಳಾಪುರ ಭಾಗದಲ್ಲಿ ಕುಡಿಯುವ ನೀರಿನ ಕೊರತೆ ಗಂಭೀರವಾಗಿದ್ದು, ಎತ್ತಿನಹೊಳೆ ಯೋಜನೆಯಡಿ ನೀರು ಹರಿಸುವ ವಾಗ್ದಾನವನ್ನು ಈಡೇರಿಸಬೇಕೆಂದು ಮನವಿ ಮಾಡಿದರು. “ಇಲ್ಲಿ ಬೆಳೆಯದ ಬೆಳೆ ಇಲ್ಲ, ಆದರೆ ನೀರೇ ಸಮಸ್ಯೆ. ಈ ಭಾಗಕ್ಕೆ ನೀರು ಬಂದರೆ ಕೃಷಿಯೂ, ಜೀವನವೂ ಬದಲಾಗುತ್ತದೆ” ಎಂದರು.
ಶಿಡ್ಲಘಟ್ಟದ ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, ಕ್ಷೇತ್ರದ 270 ಕಿಲೋಮೀಟರ್ ರಸ್ತೆಗಳು ಹದಗೆಟ್ಟು ಅಪಘಾತಗಳು ಹೆಚ್ಚಾಗಿವೆ. ವಿಶೇಷ ಅನುದಾನ ನೀಡಿ ಅಭಿವೃದ್ಧಿಗೆ ಸಹಕರಿಸಬೇಕೆಂದು ಸಿಎಂಗೆ ಮನವಿ ಮಾಡಿದರು. “ನನಗೆ ಜನ್ಮ ನೀಡಿದ ತಾಯಿ ತಂದೆ ಮತ್ತು ಈ ಕ್ಷೇತ್ರದ ಮತದಾರರ ಆಶೀರ್ವಾದದಿಂದ ನಾನು ಶಾಸಕನಾಗಿದ್ದೇನೆ. ಅವರ ಋಣ ತೀರಿಸಲು ಅಭಿವೃದ್ಧಿ ಅಗತ್ಯ” ಎಂದರು.
ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವರಿಗೆ ರೇಷ್ಮೆಯ ಹಾರ, ಶಾಲು ಹಾಗೂ ಕಂಚಿನ ಮೂರ್ತಿಗಳನ್ನು ನೀಡಿ ಸನ್ಮಾನಿಸಲಾಯಿತು. ಕುರುಬ ಸಮುದಾಯದ ಮುಖಂಡರು ಗಂಡು ಕುರಿ ಮರಿಯನ್ನು ನೀಡಿ ಸಾಂಪ್ರದಾಯಿಕವಾಗಿ ಗೌರವ ಸಲ್ಲಿಸಿದರು. ಸ್ಥಳೀಯ ಕಲಾವಿದರ ಜನಪದ ಗೀತೆಗಳು, ಜಿಲ್ಲೆಯಲ್ಲಿ ಬೆಳೆಯುವ ಬೆಳೆಗಳ ರಾಶಿ ಮತ್ತು ಜಿಲ್ಲಾ ಅಭಿವೃದ್ಧಿಯ “ಜಿಲ್ಲಾ ದರ್ಶನ” ಪುಸ್ತಕ ಎಲ್ಲರ ಗಮನ ಸೆಳೆಯಿತು.
For Daily Updates WhatsApp ‘HI’ to 7406303366
