Home News ಮೃತಪಟ್ಟ ಸೀಮೆ ಹಸುಗಳ ಜೀವ ವಿಮೆಯ ಚೆಕ್‌ ವಿತರಣೆ

ಮೃತಪಟ್ಟ ಸೀಮೆ ಹಸುಗಳ ಜೀವ ವಿಮೆಯ ಚೆಕ್‌ ವಿತರಣೆ

0
Cow Insurance Cheque Distribution

Sidlaghatta : ಮುಂದಿನ ದಿನಗಳಲ್ಲಿ ಬೇಸಿಗೆ ಆರಂಭವಾಗಲಿದ್ದು ಹೈನುಗಾರರು ತಮ್ಮ ರಾಸುಗಳನ್ನು ಮಾರಾಟ ಮಾಡುವುದಕ್ಕೆ ಮುಂದಾಗಬಾರದು, ಒಣ ಹಾಗೂ ಹಸಿ ಮೇವನ್ನು ನೀಡಿ ರಾಸುಗಳನ್ನು ನಿರ್ವಹಣೆ ಮಾಡುವಂತೆ ಕೆಎಂಎಫ್ ನಿರ್ದೇಶಕ ಆರ್.ಶ್ರೀನಿವಾಸ್ ರೈತರಲ್ಲಿ ಮನವಿ ಮಾಡಿದರು.

ನಗರದ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಶಿಬಿರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೃತಪಟ್ಟ ಸೀಮೆ ಹಸುಗಳ ಬಾಬ್ತು ಜೀವ ವಿಮೆಯ ಚೆಕ್‌ಗಳನ್ನು ರೈತರಿಗೆ ವಿತರಣೆ ಮಾಡಿ ಮಾತನಾಡಿದರು.

ಈ ಭಾರಿ ಸಾಕಷ್ಟು ಮಳೆಯ ಕೊರತೆಯಿಂದ ಕೆರೆ ಕುಂಟೆಗಳು ತುಂಬಿಲ್ಲ. ಹಾಗಾಗಿ ಬೇಸಿಗೆಯ ಬಿಸಿ ಈ ವರ್ಷ ಹೆಚ್ಚು ತಟ್ಟಲಿದೆ. ಕೆರೆ ಕುಂಟೆಗಳಲ್ಲಿ ನೀರಿಲ್ಲದ ಕಾರಣ ಹಸಿ ಹಾಗೂ ಒಣ ಮೇವಿನ ಕೊರತೆಯೂ ಕಳೆದ ವರ್ಷಗಳಿಗಿಂತಲೂ ಹೆಚ್ಚು ಬಾಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಸರಕಾರವು ಗೋಶಾಲೆಗಳನ್ನು ಆರಂಭಿಸಲಿದೆ. ಹೈನುಗಾರರು ಯಾವುದೆ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ. ನಿಮ್ಮೊಂದಿಗೆ ಸರಕಾರ, ಕೋಚಿಮುಲ್ ಸದಾ ಇರಲಿದೆ ಎಂದು ಧೈರ್ಯ ತುಂಬಿದರು.

ವಿಮೆ ಹಣ ಕಟ್ಟಿದ ರೈತರ ಸೀಮೆ ಹಸುಗಳು ಮೃತಪಟ್ಟರೆ ವಿಮೆ ಹಣ ನೆರವಿಗೆ ಬರಲಿದೆ. ವಿಮೆಯನ್ನು ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ, ಎಲ್ಲ ರೈತರೂ ತಮ್ಮ ಸೀಮೆ ಹಸುಗಳಿಗೆ ವಿಮೆ ಮಾಡಿಸಿದರೆ ಕಷ್ಟದ ಸಮಯದಲ್ಲಿ ವಿಮೆ ಹಣ ನಿಮ್ಮ ಕೈ ಹಿಡಿಯಲಿದೆ ಎಂದು ವಿಮೆಯ ಮಹತ್ವವನ್ನು ವಿವರಿಸಿದರು.

ಕೋಚಿಮುಲ್‌ನ ಶಿಬಿರ ಕಚೇರಿಯ ಉಪವ್ಯವಸ್ಥಾಪಕ ಡಾ.ಬಿ.ಆರ್.ರವಿಕಿರಣ್ ಮಾತನಾಡಿ, ಇದುವರೆಗೂ ಗರಿಷ್ಠ 60 ಸಾವಿರ ಮೊತ್ತಕ್ಕೆ ವಿಮೆ ಮಾಡಿಸಬಹುದಿದ್ದು ಇದೀಗ 70 ಸಾವಿರದವರೆಗೂ ವಿಮೆ ಮಾಡಿಸಲು ಅನುಕೂಲ ಮಾಡಿಕೊಟ್ಟಿದೆ. ಇದೀಗ ವಿಮೆಗೆ ನೋಂದಣಿ ಕಾರ್ಯ ನಡೆಯುತ್ತಿದ್ದು ರೈತರ ವಂತಿಗೆ ಶೇ ೫೦ರಷ್ಟು ಹಣ ಪಾವತಿಸಿ ವಿಮೆ ಮಾಡಿಸಿ ಎಂದರು.

ಒಟ್ಟು ವಿಮೆಯ ಕಂತಿನ ಮೊತ್ತ 2128 ರೂ.ಗಳಾಗಲಿದ್ದು ವಿಮೆ ಮೊತ್ತದ ಶೇ 50ರಷ್ಟು 1064 ರೂಗಳನ್ನು ಪಾವತಿಸಿದರೆ ಉಳಿದ ಹಣವನ್ನು ಕೋಚಿಮುಲ್‌ನಿಂದ 1064 ರೂ.ಗಳನ್ನು ಪಾವತಿಸಲಾಗುತ್ತದೆ ಎಂದು ವಿವರಿಸಿದರು. ಮೇಲ್ವಿಚಾರಕರಾದ ಉಮೇಶ್‌ರೆಡ್ಡಿ, ಮಂಜುನಾಥ್, ಗುಲಾಬ್‌ಜಾನ್, ಮುನೇಗೌಡ ಇನ್ನಿತರರು ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version