Sidlaghatta : ಬಯಲುಸೀಮೆಯ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮಳೆ ಕೊರತೆ ಹಾಗೂ ಅಂತರ್ಜಲ ಮಟ್ಟ ಕುಸಿತದಿಂದ ಬರ ಪರಿಸ್ಥಿತಿ ತೀವ್ರಗೊಂಡಿದ್ದು, ಬರಪೀಡಿತ ಪ್ರದೇಶವೆಂದು ಘೋಷಿಸಿ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ. ಆರ್. ಆಗ್ರಹಿಸಿದ್ದಾರೆ.
In English: Shashwata Neeravari Horata Samiti (Permanent Irrigation Struggle Committee) president Anjaneya Reddy R. has demanded that Kolar, Chikkaballapura and Bengaluru Rural districts be declared drought-hit and given immediate relief, citing rainfall deficit and falling groundwater levels. He sought ₹25,000 per acre in financial aid, a special package for mango growers, a scientific crop-loss survey with insurance and compensation, and tanker water supply for pomegranate, grape and other horticulture crops.

ರೈತರ ಸಂಕಷ್ಟವೇನು?
ಕಳೆದ ಮೂರು ತಿಂಗಳಿಂದ ಮಳೆಯಾಗದೆ ಖಾರಿಫ್ ಬೆಳೆಗಳು ಒಣಗುತ್ತಿವೆ. ಮಾವು, ದಾಳಿಂಬೆ, ದ್ರಾಕ್ಷಿ ಸೇರಿದಂತೆ ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳುವುದು ರೈತರಿಗೆ ಸವಾಲಾಗಿದೆ. 1,000ರಿಂದ 1,500 ಅಡಿ ಆಳದವರೆಗೆ ಕೊಳವೆಬಾವಿ ಕೊರೆದರೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇರುವ ಕೊಳವೆಬಾವಿಗಳಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಬೆಳೆಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗಿದೆ.
ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಕೊರತೆ ಎದುರಾಗಿದೆ. ಸ್ಥಳೀಯವಾಗಿ ಮೇವು ದೊರೆಯದೆ ಕುರಿ–ಮೇಕೆಗಳೊಂದಿಗೆ ಪಶುಪಾಲಕರು ದೂರದ ಪ್ರದೇಶಗಳಿಗೆ ವಲಸೆ ಹೋಗುವಂತಾಗಿದೆ. ಮೇವು ಬೆಲೆ ಏರಿಕೆಯೂ ಅವರ ಆರ್ಥಿಕ ಹೊರೆಯನ್ನು ಹೆಚ್ಚಿಸಿದೆ. ಕೃಷಿ ಚಟುವಟಿಕೆಗಳು ಕುಂಠಿತಗೊಂಡಿರುವುದರಿಂದ ಕೃಷಿ ಕಾರ್ಮಿಕರಿಗೂ ಕೆಲಸವಿಲ್ಲದಂತಾಗಿದೆ. ಉದ್ಯೋಗ ಅರಸಿ ಪಟ್ಟಣಗಳಿಗೆ ತೆರಳಿದರೂ ಅಲ್ಲಿಯೂ ಕಟ್ಟಡ ನಿರ್ಮಾಣ ಹಾಗೂ ಇತರ ಕೂಲಿ ಕೆಲಸಗಳು ಕಡಿಮೆಯಾಗಿವೆ. ಇದರಿಂದ ಬರದ ಪರಿಣಾಮ ಗ್ರಾಮೀಣ ಆರ್ಥಿಕತೆಯ ಮೇಲೂ ಬೀರಿದೆ.
ಆಗ್ರಹಗಳೇನು?
- ಬರಪೀಡಿತ ಪ್ರದೇಶವೆಂದು ಘೋಷಿಸಿ ತಕ್ಷಣ ಪರಿಹಾರ ಕ್ರಮ
- ಪ್ರತಿ ಎಕರೆಗೆ ₹25 ಸಾವಿರ ಆರ್ಥಿಕ ನೆರವು
- ಮಾವು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್
- ಬೆಳೆ ನಷ್ಟದ ವೈಜ್ಞಾನಿಕ ಸಮೀಕ್ಷೆ ನಡೆಸಿ ವಿಮೆ ಹಾಗೂ ಪರಿಹಾರ ಬಿಡುಗಡೆ
- ದಾಳಿಂಬೆ, ದ್ರಾಕ್ಷಿ ಮತ್ತು ಇತರ ತೋಟಗಾರಿಕೆ ಬೆಳೆಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ
- ಬಯಲುಸೀಮೆಗೆ ಶಾಶ್ವತ ನೀರಾವರಿ ಯೋಜನೆಗಳ ತ್ವರಿತ ಪೂರ್ಣಗೊಳಿಸುವಿಕೆ
- ಜಾನುವಾರುಗಳಿಗೆ ಕಡಿಮೆ ದರದಲ್ಲಿ ಮೇವು ಪೂರೈಕೆ
“ಸರ್ಕಾರ ಭರವಸೆಗಳಿಗೆ ಸೀಮಿತವಾಗದೆ ತಕ್ಷಣ ರೈತರ ನೆರವಿಗೆ ಧಾವಿಸಬೇಕು” ಎಂದು ಆಂಜನೇಯ ರೆಡ್ಡಿ ಒತ್ತಾಯಿಸಿದ್ದಾರೆ. ಈಗಾಗಲೇ ಬಿತ್ತನೆ ಆಧಾರದಲ್ಲಿ ಬರ ಘೋಷಿಸಬೇಕೆಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದ್ದರು ಹಾಗೂ ಬರಪೀಡಿತ ತಾಲ್ಲೂಕಿನಲ್ಲಿ ತೆರಿಗೆ ಜಪ್ತಿ ನೋಟಿಸ್ ಜಾರಿಯಾಗಿದ್ದಕ್ಕೂ ರೈತರ ಆಕ್ರೋಶ ವ್ಯಕ್ತವಾಗಿತ್ತು. ಬರದ ಹಿನ್ನೆಲೆಯಲ್ಲೇ ಈ ಬಾರಿ ಸರಳ ಗಣೇಶೋತ್ಸವಕ್ಕೆ ತಾಲ್ಲೂಕು ಆಡಳಿತ ಸೂಚನೆ ನೀಡಿತ್ತು.

