ಬಿತ್ತನೆ ಆಧಾರದಲ್ಲಿ ಬರ ಘೋಷಿಸಿ: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹ

- Advertisement -
- Advertisement -

Sidlaghatta : ರಾಜ್ಯದ ಎಲ್ಲ ಜಿಲ್ಲೆಗಳ ಎಲ್ಲ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿ, ಕೂಡಲೇ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಹಸಿರು ಸೇನೆ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದರು.

In English: State Raita Sangha (Hasiru Sene) president Kodihalli Chandrashekhar has demanded that every taluk in the state be declared drought-affected and relief works started immediately, after touring farms in Veerapura and other villages in Sidlaghatta taluk on Saturday. He argued drought status should be based on sowing shortfall rather than rainfall data alone, and also commented on Cauvery water sharing and land-acquisition policy for industry.

ತಾಲ್ಲೂಕಿನ ವೀರಾಪುರ ಸೇರಿದಂತೆ ವಿವಿಧ ಗ್ರಾಮಗಳ ಹೊಲಗಳಿಗೆ ಶನಿವಾರ ಭೇಟಿ ನೀಡಿ ಬಿತ್ತನೆ ಹಾಗೂ ಬರದ ಸ್ಥಿತಿಗತಿ ಕುರಿತು ರೈತರೊಂದಿಗೆ ಚರ್ಚಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

“ರಾಜ್ಯ ಅಥವಾ ಕೇಂದ್ರ ಸರ್ಕಾರ 100 ತಾಲ್ಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿದೆ. ಉಳಿದ ಎಲ್ಲ ತಾಲ್ಲೂಕುಗಳನ್ನೂ ಬರಪೀಡಿತ ಎಂದು ಘೋಷಿಸಬೇಕು. ಇದು ಕೇವಲ ಕಣ್ಣೊರೆಸುವ ತಂತ್ರವಾಗಬಾರದು” ಎಂದು ಅವರು ಹೇಳಿದರು.

“ಈ ಹಿಂದೆ ಶೇ 25ರಷ್ಟು ಬಿತ್ತನೆಯಾಗದಿದ್ದರೆ ಬರ ಎಂದು ಘೋಷಿಸುವ ನಿಯಮವಿತ್ತು. ಇದೀಗ ಮಳೆ ಆಧಾರದಲ್ಲಿ ಬರ ನಿರ್ಧರಿಸಲಾಗುತ್ತಿದೆ. ಇದು ಸೂಕ್ತ ಕ್ರಮವಲ್ಲ. ಸಾಕಷ್ಟು ಮಳೆಯಾದರೂ ಸಕಾಲದಲ್ಲಿ ಮಳೆ ಬೀಳದಿದ್ದರೆ ಬಿತ್ತನೆ ಮಾಡಲು ಸಾಧ್ಯವಾಗುವುದಿಲ್ಲ. ರಾಜ್ಯದ ಹಲವು ಭಾಗಗಳಲ್ಲಿ ಈ ವರ್ಷವೂ ಇದೇ ಪರಿಸ್ಥಿತಿ ಇದೆ. ಆದ್ದರಿಂದ ಮಳೆ ಪ್ರಮಾಣದ ಬದಲು ಬಿತ್ತನೆ ಆಧಾರದಲ್ಲಿ ಬರ ಘೋಷಿಸಬೇಕು” ಎಂದು ಆಗ್ರಹಿಸಿದರು.

ಕಾವೇರಿ ನೀರು: ಪರಿಸ್ಥಿತಿ ಅವಲೋಕಿಸಿ ನಿರ್ಧಾರ

“ರಾಜ್ಯದಲ್ಲಿ ಸಂಕಷ್ಟದ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವ ವಿಚಾರದಲ್ಲಿ ಕಾನೂನಿನ ಅಂಶಗಳ ಜತೆಗೆ ಎರಡೂ ರಾಜ್ಯಗಳಲ್ಲಿನ ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯ ನೀರು ಹಂಚಿಕೆ ಮಾಡಿಕೊಳ್ಳಬೇಕು” ಎಂದು ಅವರು ಅಭಿಪ್ರಾಯಪಟ್ಟರು.

“ರಾಜ್ಯದಲ್ಲಿ ಬರಗಾಲವಿದ್ದು, ಬಹುತೇಕ ಕೆರೆ–ಕುಂಟೆಗಳು ಬತ್ತಿವೆ. ಜಲಾಶಯಗಳಲ್ಲೂ ಸಾಕಷ್ಟು ನೀರಿಲ್ಲ. ಆದರೆ ತಮಿಳುನಾಡಿನ ಹಲವು ಜಲಾಶಯಗಳಲ್ಲಿ ನೀರಿನ ಲಭ್ಯತೆ ಇದೆ. ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕಾವೇರಿ ಪ್ರಾಧಿಕಾರದ ಅಧಿಕಾರಿಗಳು ಎರಡೂ ರಾಜ್ಯಗಳಲ್ಲಿನ ನೀರಿನ ಸ್ಥಿತಿಗತಿ ಅಧ್ಯಯನ ಮಾಡಿ, ಅದರ ಆಧಾರದಲ್ಲಿ ನೀರು ಬಿಡುವ ಕುರಿತು ನಿರ್ಧರಿಸಬೇಕು” ಎಂದರು.

ರೈತರ ಜಮೀನು ಸ್ವಾಧೀನ ಕೈಬಿಡಿ

ಕೈಗಾರಿಕೆಗಳಿಗೆ ಜಮೀನು ಅಗತ್ಯವಿದ್ದಾಗ ಸರ್ಕಾರ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಕೈಬಿಡಬೇಕು. ರೈತರ ಒಪ್ಪಿಗೆ ಪಡೆದು, ಅವರು ಜಮೀನು ನೀಡಲು ಸಮ್ಮತಿಸಿದರೆ ಮಾತ್ರ ಪಡೆಯುವ ವ್ಯವಸ್ಥೆ ಜಾರಿಗೆ ಬರಬೇಕು. ಈ ಸಂಬಂಧ ಕಾನೂನು ರೂಪಿಸಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದರು.

“ರೈತರನ್ನು ಕೇಳದೆ ಜಮೀನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಸರ್ಕಾರವು ಉದ್ದಿಮೆದಾರರು ಮತ್ತು ರೈತರ ನಡುವೆ ದಲ್ಲಾಳಿಯಂತೆ ಕಾರ್ಯನಿರ್ವಹಿಸುವುದನ್ನು ಬಿಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ದೌರ್ಜನ್ಯ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಹಿತ್ತಲಹಳ್ಳಿ ರಮೇಶ್, ತಾದೂರು ಮಂಜುನಾಥ್, ವೇಣು, ಬಿ.ನಾರಾಯಣಸ್ವಾಮಿ, ಗೋಪಾಲ್, ವೀರಾಪುರ ಮುನಿನಂಜಪ್ಪ, ಬಸವರಾಜು, ಮಂಜುನಾಥ್, ರೈತ ಮಹಿಳೆ ಅಶ್ವತ್ಥಮ್ಮ ಇದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Silk

Related news

- Advertisement -