
Sidlaghatta : ಶಿಡ್ಲಘಟ್ಟ ನಗರಸಭೆ (CMC) ಆವರಣದಲ್ಲಿ ಗುರುವಾರ ಮತದಾರರ ಗುರುತಿನ ಚೀಟಿಗೆ (EPIC) ಆಧಾರ್ ಕಾರ್ಡ್ ಸಂಖ್ಯೆಯನ್ನು ಜೋಡಿಸುವ (UIDAI – Aadhaar Linking) ಕಾರ್ಯಕ್ಕೆ ಚಾಲನೆ ನೀಡಿ ನಗರಸಭೆ ಪೌರಾಯುಕ್ತ ಶ್ರೀಕಾಂತ್ ಅವರು ಮಾತನಾಡಿದರು.
ಚುನಾವಣೆ ಸಂದರ್ಭದಲ್ಲಿ ನಕಲಿ ಗುರುತಿನ ಚೀಟಿ ತಪ್ಪಿಸಲು ಮತದಾನದ ಗುರುತಿನ ಚೀಟಿಗೆ ಆಧಾರ್ ಜೋಡಣೆ ಮಾಡಲಾಗುತ್ತಿದೆ. ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ಪರಿಷ್ಕರಣೆ, ಅರ್ಹ ಯುವ ಮತದಾರರ ಸೇರ್ಪಡೆ ಮತ್ತು ಮತದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಜೋಡಿಸುವ ಕಾರ್ಯಗಳನ್ನು ಮಾಡಬೇಕಿದೆ. ಮುಂಬರುವ ಚುನಾವಣೆಗಳಿಗೆ ಮುನ್ನಾ ಜಿಲ್ಲೆಯಲ್ಲಿ ಆಧಾರ್ ಜೋಡಣೆಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಿದೆ ಎಂದು ಅವರು ತಿಳಿಸಿದರು.
VHA ಆ್ಯಪ್ ಮೂಲಕ ಇಲ್ಲವೇ http:/nvsp.in ಮೂಲಕ ಆಧಾರ್ ಲಿಂಕ್ ಮಾಡಿಕೊಳ್ಳಬಹುದು. ಆಧಾರ್ ಕಾರ್ಡ್ ಇಲ್ಲದವರು ಎಂನರೇಗಾದ ಉದ್ಯೋಗ ಕಾರ್ಡ್, ಬ್ಯಾಂಕ್, ಅಂಚೆ ಕಚೇರಿಯಿಂದ ನೀಡಲಾದ ಭಾವಚಿತ್ರವಿರುವ ಪಾಸ್ ಪುಸ್ತಕ, ಕಾರ್ಮಿಕ ಮಂತ್ರಾಲಯದ ಯೋಜನೆಯ ಅಡಿಯಲ್ಲಿ ನೀಡಲಾದ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಎನ್‍ಪಿಆರ್ ಅಡಿಯಲ್ಲಿ ಆರ್‌ಜಿಐ ಮೂಲಕ ನೀಡಲಾದ ಸ್ಮಾರ್ಟ್‍ಕಾರ್ಡ್, ಇಂಡಿಯನ್ ಪಾಸ್ ಪೋರ್ಟ್, ಪಿಂಚಣಿ ದಾಖಲೆ, ಕೇಂದ್ರ, ರಾಜ್ಯ ಸರ್ಕಾರ, ಸಾರ್ವಜನಿಕ ವಲಯದ ಉದ್ದಿಮೆಗಳು, ಸಾರ್ವಜನಿಕ ನಿಯಮಿತ ಕಂಪನಿಗಳಿಂದ ಉದ್ಯೋಗಿಗಳಿಗೆ ನೀಡಲಾದ ಸೇವಾ ಗುರುತಿನ ಚೀಟಿ, ಸಂಸದರು, ಶಾಸಕರಿಗೆ ನೀಡಲಾದ ಗುರುತಿನ ಚೀಟಿ, ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ಮೂಲಕ ನೀಡಲಾದ ವಿಶಿಷ್ಟ ಗುರುತಿನ ಚೀಟಿ (UIDAI) ಸಂಖ್ಯೆಯನ್ನು ನಮೂದಿಸಬಹುದು ಎಂದು ವಿವರಿಸಿದರು.
ಎಪಿಕ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಮತದಾರರು ಸಹ ತಮ್ಮ ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಗೆ ಲಿಂಕ್ ಮಾಡಬೇಕು. ಅದನ್ನು ಮತದಾರರು ನಮೂನೆ 6 (ಬಿ) ಯಲ್ಲಿ ವೆಬ್ ಸೈಟ್ www.nvsp.in ಮೂಲಕ ಅಥವಾ ವೋಟರ್ ಹೆಲ್ಪ್ ಲೈನ್ ಆಪ್(ವಿ.ಎಚ್.ಎ), ಗರುಡ ಆಪ್ ಹಾಗೂ ಬೂತ್ ಮಟ್ಟದ ಅಧಿಕಾರಿಗಳಿಗೆ ಆಧಾರ್ ಸಂಖ್ಯೆ ನೀಡಿ ಚುನಾವಣಾ ಗುರುತಿನ ಚೀಟಿಗೆ ಅದನ್ನು ಜೋಡಣೆ ಮಾಡಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರು, ಸದಸ್ಯರು, ಮುಖಂಡರು ಹಾಗೂ ನಗರಸಭೆ ಸಿಬ್ಬಂದಿಯ ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಗೆ ಲಿಂಕ್ ಮಾಡಲಾಯಿತು.