Home News ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ಮಂಜುಳ ಭೇಟಿ ; ವಿವಿಧ ಕಾಮಗಾರಿಗಳ ವೀಕ್ಷಣೆ

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ಮಂಜುಳ ಭೇಟಿ ; ವಿವಿಧ ಕಾಮಗಾರಿಗಳ ವೀಕ್ಷಣೆ

0

Sidlaghatta : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಆಡಳಿತಾಧಿಕಾರಿ ಡಾ.ಎನ್.ಮಂಜುಳ ಅವರು ಅಧಿಕಾರಿಗಳೊಂದಿಗೆ ತಾಲ್ಲೂಕಿಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿದರು. ಅಂಗನವಾಡಿ ಕೇಂದ್ರ, ವಸತಿ ನಿಲಯ ಹಾಗೂ ಕಾಲೇಜಿಗೆ ಭೇಟಿ ನೀಡಿದ್ದರು.

ಅಬ್ಲೂಡು ಗ್ರಾಮ ಪಂಚಾಯಿತಿಯ ನಿರ್ಮಾಣ ಹಂತದ ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡವನ್ನು ವೀಕ್ಷಿಸಿದ ಅವರು ಕಟ್ಟಡದ ಗುಣಮಟ್ಟವನ್ನು ಪರಿಶೀಲಿಸಿ ಇನ್ನಷ್ಟು ಗುಣಮಟ್ಟವನ್ನು ಕಾಪಾಡಿಕೊಳ್ಳುವಂತೆ ಸೂಚಿಸಿದರು. ಹಾಗೆಯೆ ವಿಕಲಚೇತನರು ಕೂಡ ಸರಾಗವಾಗಿ ಕಚೇರಿಗೆ ಬಂದು ಹೋಗುವಂತೆ ರ್‍ಯಾಂಪ್‌ಗಳನ್ನು ನಿರ್ಮಿಸಲು ಸೂಚಿಸಿದರು.

ಕೋಟಹಳ್ಳಿಯ ಅಂಗನವಾಗಿ ಕೇಂದ್ರಕ್ಕೆ ಭೇಟಿ ನೀಡಿದ ಅವರು ಅಂಗನವಾಡಿ ಕೇಂದ್ರದಲ್ಲಿ ಸೂಕ್ತ ಗಾಳಿ ಬೆಳಕು ಇಲ್ಲದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಅದು ಹಳೆಯ ಕಟ್ಟಡವಾಗಿದ್ದು ಇದೀಗ ನೂತನ ಅಂಗನವಾಡಿ ಕಟ್ಟಡವನ್ನು ನಿರ್ಮಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದರು. ನೂತನ ಕಟ್ಟಡವನ್ನು ವೀಕ್ಷಿಸಿ ಅಲ್ಲಿ ಗಾಳಿ ಬೆಳಕು ಸರಾಗವಾಗಿ ಹರಿದಾಡಲು ಅನುಕೂಲ ಆಗುವಂತೆ ವ್ಯವಸ್ಥೆ ಮಾಡುತ್ತಿರುವುದುನ್ನು ವೀಕ್ಷಿಸಿದರು.

ಅಂಗನವಾಡಿ ಕೇಂದ್ರದಲ್ಲಿನ ಮಕ್ಕಳೊಂದಿಗೆ ಕೆಲ ಕಾಲ ಮಾತುಕತೆ ನಡೆಸಿದ ಅವರು, ಈ ದಿನ ಏನೇನು ತಿಂದಿದ್ದೀರಾ, ಏನೇನು ಕಲಿಯುತ್ತಿದ್ದೀರಾ ಎಂದು ಕೇಳಿದರು. ಇಲ್ಲಿ ಮೇಡಂ ಏನನ್ನು ಕಲಿಸುತ್ತಾರೆ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದಾಗ ಚಿಕ್ಕ ಮಕ್ಕಳು ತೊದಲು ನುಡಿಗಳಲ್ಲೆ ಉತ್ತರಿಸಿದರು.

ಪಟ್ರಹಳ್ಳಿ ಸಸ್ಯ ಕ್ಷೇತ್ರಕ್ಕೂ ಭೇಟಿ ನೀಡಿದ ಅವರು, ಮಳೆಗಾಲದಲ್ಲಿ ರೈತರು ಹಾಗೂ ನಾಗರೀಕರಿಗೆ ಅಗತ್ಯವಾದ ಸಸಿಗಳನ್ನು ಬೆಳೆಸಿ ಸಕಾಲಕ್ಕೆ ಸರ್ಕಾರ ನಿಗದಿಪಡಿಸಿದ ಬೆಲೆಗೆ ನೀಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಮುಂಚೆಯೆ ರೈತರಿಂದ ಬೇಡಿಕೆ ಇರುವ ಸಸಿಗಳನ್ನು ಲೆಕ್ಕಕ್ಕೆ ತೆಗೆದುಕೊಂಡು ಅದರ ಬೇಡಿಕೆಗೆ ಅನುಗುಣವಾಗಿ ಕ್ರಿಯಾ ಯೋಜನೆ ರೂಪಿಸಿಕೊಂಡು ಸಸಿಗಳನ್ನು ಬೆಳೆಸಬೇಕು. ಸಕಾಲಕ್ಕೆ ನೀಡುವುದು ಮುಖ್ಯ. ರೈತರು ಕೇಳಿದಾಗ ನೀಡದೆ ನಾವು ಬೆಳೆಸಿದಾಗ ನೀಡಿದರೆ ಉಪಯೋಗವಾಗದು ಎಂದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹನುಮಂತಪುರ ಗೇಟ್ ಬಳಿ ಇರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯ, ವರದನಾಯಕನಹಳ್ಳಿ ಗೇಟ್ ಬಳಿ ಇರುವ ಸಾಮಾಜಿಕ ಅರಣ್ಯ ವಲಯಕ್ಕೂ ಭೇಟಿ ನೀಡಿ ವೀಕ್ಷಿಸಿದರು.

ಜಿಲ್ಲಾಧಿಕಾರಿ ಪಿ.ಎನ್.ರವಿಂದ್ರ, ಅಪರ ಜಿಲ್ಲಾಧಿಕಾರಿ ಭಾಸ್ಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ವೆಂಕಟೇಶ್‌ರೆಡ್ಡಿ, ತಹಶೀಲ್ದಾರ್ ಬಿ.ಎನ್.ಸ್ವಾಮಿ, ತಾಲ್ಲೂಕು ಪಂಚಾಯಿತಿ ಇಒ ಆರ್.ಹೇಮಾವತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮೂರ್ತಿ, ಸಿಡಿಪಿಒ ವಿದ್ಯಾ ವಸ್ತ್ರದ್, ಆರೋಗ್ಯ ನಿರೀಕ್ಷಣಾಧಿಕಾರಿ ದೇವರಾಜ್, ತಾಲ್ಲೂಕು ಐಇಸಿ ಸಂಯೋಜಕ ಲೋಕೇಶ್ ಇದ್ದರು.

For Daily Updates WhatsApp ‘HI’ to 7406303366

Namma Sidlaghatta WhatsApp Channel

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version